ಕೊರೋನದ ಮೂರನೇ ಅಲೆ ತಡೆಯಲು ಯಜ್ಞ ಮಾಡಬೇಕು ಎಂದ ಮಧ್ಯಪ್ರದೇಶದ ಸಚಿವೆ
ಭೋಪಾಲ್: ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಕೊರೋನದ ಮೂರನೇ ಅಲೆಯನ್ನು ತಡೆಯಲು ಈ ಸಮಯದಲ್ಲಿ, ಪ್ರತಿಯೊಬ್ಬರೂ ಮೂರು ದಿನಗಳ ಕಾಲ ಯಜ್ಞದಲ್ಲಿ ಭಾಗವಹಿಸಲು ಹಾಗೂ ಪರಿಸರವನ್ನು ಶುದ್ಧೀಕರಿಸಲು, ವೈರಸ್ ಅನ್ನು ದೂರವಿಡಲು ಸಚಿವೆ ಕೇಳಿಕೊಂಡರು.
ಅನಾದಿ ಕಾಲದಿಂದಲೂ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಯಜ್ಞದ ಆಚರಣೆ ಇದೆ. ಇದು ಯಜ್ಞ ಚಿಕಿತ್ಸೆಯಾಗಿದೆ. ಇದು ಧರ್ಮಾಂಧತೆ ಅಥವಾ ಆಚರಣೆ ಅಲ್ಲ. ಈ ಯಜ್ಞವನ್ನು ಪ್ರಾರಂಭಿಸುವ ಮೂಲಕ ಪರಿಸರವನ್ನು ಶುದ್ಧೀಕರಿಸುವ ಕಡೆಗೆ ನಾವೆಲ್ಲರೂ ಮುಂದೆ ಬಂದು ನಮ್ಮ ಜವಾಬ್ದಾರಿಯನ್ನು ಪೂರೈಸಬೇಕು. ಇದರಿಂದ ಮೂರನೆ ಅಲೆಯು ಭಾರತವನ್ನು ಮುಟ್ಟಲು ಸಹ ಸಾಧ್ಯವಾಗುವುದಿಲ್ಲ ”ಎಂದು ಇಂದೋರ್‌ನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸುವಾಗ ಠಾಕೂರ್ ಹೇಳಿದರು.
ಇದಕ್ಕೂ ಮುನ್ನ ಎಪ್ರಿಲ್ 11 ರಂದು ಮಾಸ್ಕ್ ಧರಿಸದೆ ಠಾಕೂರ್ ಇಂದೋರ್ ವಿಮಾನ ನಿಲ್ದಾಣದಲ್ಲಿ ದೇವಿ ಅಹಲ್ಯಾಬಾಯಿ ಹೊಲ್ಕರ್ ವಿಗ್ರಹದ ಮುಂದೆ ಪೂಜೆ ಸಲ್ಲಿಸಿದ್ದರು, ಸಾಂಕ್ರಾಮಿಕ ರೋಗವನ್ನು ನಿವಾರಿಸಲು ನಡೆಸಿದ್ದ ಪೂಜೆಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಕುಳಿತುಕೊಂಡಿದ್ದರು.