ದಿಲ್ಲಿಗೆ ಕೊವ್ಯಾಕ್ಸಿನ್ ಲಸಿಕೆ ಪೂರೈಸದಂತೆ ಕೇಂದ್ರದ ಸೂಚನೆ: ಮನೀಷ್ ಸಿಸೋಡಿಯಾ ಆರೋಪ

Update: 2021-05-12 17:22 GMT

ಹೊಸದಿಲ್ಲಿ, ಮೇ 12: ಕೇಂದ್ರ ಸರಕಾರದ ಸೂಚನೆಯಂತೆ ದಿಲ್ಲಿಗೆ ಕೊವ್ಯಾಕ್ಸಿನ್ ಲಸಿಕೆ ಪೂರೈಸಲು ಭಾರತ್ ಬಯೊಟೆಕ್ ಸಂಸ್ಥೆ ನಿರಾಕರಿಸಿದೆ. ಕೇಂದ್ರ ಸರಕಾರ ಕೋವಿಡ್-19 ಲಸಿಕೆಯ ಪೂರೈಕೆಯನ್ನು ನಿಯಂತ್ರಿಸುತ್ತಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಇದನ್ನು ನಿರಾಕರಿಸಿರುವ ಭಾರತ್ ಬಯೊಟೆಕ್, ತನ್ನ ಉದ್ದೇಶದ ಬಗ್ಗೆ ಕೆಲವು ರಾಜ್ಯಗಳು ದೂರುತ್ತಿರುವುದರಿಂದ ನಿರಾಶೆಯಾಗಿದೆ ಎಂದಿದೆ. ಬುಧವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಸಿಸೋಡಿಯಾ ʼಕೇಂದ್ರದ ಆದೇಶ ಮತ್ತು ಸೀಮಿತ ಲಭ್ಯತೆಯಿಂದಾಗಿ ದಿಲ್ಲಿಗೆ ಲಸಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಭಾರತ್ ಬಯೊಟೆಕ್ ಪತ್ರಬರೆದು ತಿಳಿಸಿದೆ. 

ಕೇಂದ್ರ ಸರಕಾರ ಲಸಿಕೆ ಪೂರೈಕೆಯನ್ನು ನಿಯಂತ್ರಿಸುತ್ತಿದೆ ಎಂಬುದು ಇದರರ್ಥವಾಗಿದೆ.  18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ನೀಡಲು 1.34 ಕೋಟಿ ಡೋಸ್ ಲಸಿಕೆ(ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಸೇರಿ) ಪೂರೈಸುವಂತೆ ದಿಲ್ಲಿ ಸರಕಾರ ಕೋರಿತ್ತು. ಆದರೆ ಇದಕ್ಕೆ ಉತ್ತರಿಸಿದ್ದ ಭಾರತ್ ಬಯೋಟೆಕ್, ಯಾರಿಗೆ ಯಾವ ಲಸಿಕೆ ಎಷ್ಟು ಪ್ರಮಾಣದಲ್ಲಿ ಪೂರೈಸಬೇಕು ಎಂಬುದನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದರು. ಜೊತೆಗೆ ಮೇ 7ರಂದು ಭಾರತ್ ಬಯೊಟೆಕ್ನ ಅಧ್ಯಕ್ಷ ಕೃಷ್ಣಾ ಏಲ್ಲ ಬರೆದಿರುವ ಪತ್ರವನ್ನು  ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.

ಸಂಸ್ಥೆಯ ಲಸಿಕೆಗೆ ಅಭೂತಪೂರ್ವ ಬೇಡಿಕೆಯಿದ್ದು ಪ್ರತೀ ತಿಂಗಳೂ ಉತ್ಪಾದನೆ ಹೆಚ್ಚಿಸುತ್ತಿದ್ದರೂ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕೇಂದ್ರಸರಕಾರದ ಅಧಿಕಾರಿಗಳ ಸೂಚನೆಯಂತೆ ನಾವು ಲಸಿಕೆ ಕಳಿಸುತ್ತಿದ್ದೇವೆ. ಆದ್ದರಿಂದ ನೀವು ಕೋರಿದಂತೆ ಹೆಚ್ಚುವರಿ ಲಸಿಕೆ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಟ್ವಿಟರ್ ಮೂಲಕವೇ ಪ್ರತಿಕ್ರಿಯಿಸಿರುವ ಕೃಷ್ಣಾ ಏಲ್ಲ "ಮೇ 10ರಂದು 18 ರಾಜ್ಯಗಳಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು(ನಮ್ಮಿಂದ ಸಾಧ್ಯವಾದಷ್ಟು ಪ್ರಮಾಣದಲ್ಲಿ) ರವಾನಿಸಿದ್ದೇವೆ. ಆದರೂ ಕೆಲವು ರಾಜ್ಯಗಳು ದೂರುತ್ತಿರುವುದರಿಂದ ನಿರಾಶೆಯಾಗಿದೆ. ಕೋವಿಡ್ ಸೋಂಕಿನಿಂದಾಗಿ ನಮ್ಮ ಸುಮಾರು 50 ಸಿಬ್ಬಂದಿಗಳು ಕರ್ತವ್ಯದಿಂದ ಗೈರಾಗಿದ್ದಾರೆ. ಆದರೂ ದಿನದ 24 ಗಂಟೆಯೂ ನಿಮಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಉತ್ತರಿಸಿದ್ದಾರೆ.

ಲಸಿಕೆಯ ರಫ್ತು ನಿಲ್ಲಿಸಿ, ಕೋವಿಡ್ ಲಸಿಕೆಯ ಸೂತ್ರ(ಫಾರ್ಮುಲಾ)ವನ್ನು ಇತರ ಸಂಸ್ಥೆಗಳಿಗೆ ತಿಳಿಸಿ ಉತ್ಪಾದನೆ ಹೆಚ್ಚಿಸಿ ಲಸಿಕೆಯ ಕೊರತೆ ನಿವಾರಿಸಬಹುದು. ಜೊತೆಗೆ, ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಲಸಿಕೆ ಖರೀದಿಸಿ ರಾಜ್ಯಗಳಿಗೆ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News