ಗಂಗಾ ನದಿಗೆ ಎಸೆಯಲಾದ ಕೊರೋನ ಸೋಂಕಿತರ ಶವಗಳ ತೆರವಿಗೆ ಬಲೆ ಇರಿಸಿದ ಬಿಹಾರ

Update: 2021-05-12 17:45 GMT

 ಹೊಸದಿಲ್ಲಿ,ಮೇ 12: ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆಂದು ಶಂಕಿಸಲಾದ 70ಕ್ಕೂ ಅಧಿಕ ಮೃತದೇಹಗಳು ಗಂಗಾನದಿಯಲ್ಲಿ ತೇಲಿಬಂದಿರುವ ಹಿನ್ನೆಲೆಯಲ್ಲಿ ಶವಗಳನ್ನು ತೆಗೆಯಲು ಬಿಹಾರದಲ್ಲಿ ಗಂಗಾನದಿಯುದ್ದಕ್ಕೂ ಬಲೆಗಳನ್ನು ಸ್ಥಾಪಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಪ್ರದೇಶಕ್ಕೆ ತಾಗಿಕೊಂಡಿರುವ ಬಿಹಾರದ ಗಡಿ ಪಟ್ಟಣವಾದ ಚೌಸಾದ ಬಳಿ ಹರಿಯುವ ಗಂಗಾನದಿಯಲ್ಲಿ 71 ಮೃತದೇಹಗಳು ತೇಲಿಬಂದಿರುವುದು ಸೋಮವಾರ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಕೊರೋನ ಸೋಂಕು ಭಾರತದ ಗ್ರಾಮೀಣ ಪ್ರದೇಶಗಳಿಗೂವ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಆತಂಕಗಳು ವ್ಯಕ್ತವಾಗಿದ್ದವು.
  
ಕೊರೋನದಿಂದ ಮೃತರಾದವರ ಶವಗಳನ್ನು ಸಾಂಪ್ರದಾಯಿಕ ಹಿಂದೂ ಪದ್ದತಿಯಲ್ಲಿ ಸುಡಲು ಬೇಕಾದ ಕಟ್ಟಿಗೆಗಳನ್ನು ದುಬಾರಿ ದರದಲ್ಲಿ ಖರೀದಿಸಲು ಸಾಧ್ಯವಾಗದೆ ಅಥವಾ ಚಿತಾ ಗಾರಗಳಲ್ಲಿ ಅಂತ್ಯಸಂಸ್ಕಾರಕ್ಕೆ ತರಲಾಗುತ್ತಿರುವ ಶವಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿರುವುದರಿಂದ ಬಂಧುಗಳು ಈ ಮೃತದೇಹಗಳನ್ನು ಗಂಗಾನದಿಗೆ ಎಸೆಯುತ್ತಿದಾರೆಂದು ಸ್ಥಳೀಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.
      
ಈ ಮಧ್ಯೆ ಉತ್ತರಪ್ರದೇಶದ ತಾಗಿಕೊಂಡಿರುವ ಬಿಹಾರದ ಗಡಿಯಲ್ಲಿ ನದಿಗಳಿಗೆ ಎಸೆಯಲಾಗುತ್ತಿರುವ ಶವಗಳನ್ನು ಹೊರತೆಗೆಯಲು ಬಲೆಯನ್ನು ಸ್ಥಾಪಿಸಲಾಗಿದೆ ಹಾಗೂ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲಾಗಿದೆ ಎಂದು ಬಿಹಾರದ ಜಲ ಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಬುಧವಾ ರ ಟ್ವೀಟ್ ಮಾಡಿದ್ದಾರೆ.

ಇಂತಹ ದುರಂತ ಹಾಗೂ ಗಂಗಾನದಿಗಾಗುತ್ತಿರುವ ಹಾನಿಯು ಬಿಹಾರ ಸರಕಾರಕ್ಕೆ ನೋವುಂಟು ಮಾಡಿದೆಯೆಂದು ಸಂಜಯ್ ಕುಮಾರ್ ತಿಳಿಸಿದ್ದಾರೆ.
   
ಬಿಹಾರದ ಗಂಗಾನದಿಯಲ್ಲಿ ತೇಲಿಬರುತ್ತಿರುವ ಶವಗಳು ನಾಲ್ಕೈದು ದಿನಗಳ ಹಿಂದೆ ಮೃತಪಟ್ಟವರದ್ದಾಗಿದೆಯೆಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
  
ಉತ್ತರಪ್ರದೇಶದ ಗಹ್ಮಾರ್ ಜಿಲ್ಲೆಯಲ್ಲಿ ಹರಿಯುವ ಗಂಗಾನದಿಯಲ್ಲಿ ಮಂಗಳವಾರ 25 ಮೃತದೇಹಗಳನ್ನು ಹೊರಗೆತ್ತಲಾಗಿತ್ತು.
  
ಉತ್ತರಪ್ರದೇಶದ ಸ್ಮಶಾನಗಳಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕಾಗಿ ದೀರ್ಘವಾದ ಸರತಿ ಸಾಲುಗಳು ಕಂಡುಬರುತ್ತಿದ್ದು ಈ ಹಿನ್ನೆಲೆಯಲ್ಲಿ ಕೆಲವರು ಮೃತದೇಹಗಳನ್ನು ನದಿಗೆ ಎಸೆದಿರುವ ಸಾಧ್ಯತಯಿದೆ ಎಂದು ಗಹ್ಮಾರ್ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News