×
Ad

ಕೊರೋನದಿಂದ ಮೃತಪಟ್ಟ ಗರ್ಭಿಣಿ ವೈದ್ಯೆಯ ಅಂತಿಮ ವೀಡಿಯೊ ಸಂದೇಶ ಶೇರ್ ಮಾಡಿದ ಪತಿ

Update: 2021-05-12 23:39 IST

ಹೊಸದಿಲ್ಲಿ, ಮೇ 12: ಕೊರೋನ ಸೋಂಕಿಗೆ ಒಳಗಾಗಿದ್ದ ದಿಲ್ಲಿಯ ದಂತವೈದ್ಯೆ ಮೃತಪಟ್ಟಿದ್ದು ಅಂತಿಮ ದಿನಗಳಲ್ಲಿ ಇವರು ತನ್ನ ಕುಟುಂಬದ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ವೀಡಿಯೊ ಮೂಲಕ ಮಾಡಿಕೊಂಡ ಸಂದೇಶವನ್ನು ಅವರ ಪತಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದು ವೈರಲ್ ಆಗಿದೆ. ಮಾರಣಾಂತಿಕ ಸೋಂಕುರೋಗ ಕೊರೋನದ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ವೈದ್ಯೆ ಸಲಹೆ ನೀಡಿದ್ದಾರೆ.

7 ತಿಂಗಳ ಗರ್ಭಿಣಿಯಾಗಿದ್ದ ದಿಲ್ಲಿ ಮೂಲದ  ದಂತವೈದ್ಯೆ ಡಾ. ಡಿಂಪಲ್ ಅರೋರಾ ಚಾವ್ಲ ಎಪ್ರಿಲ್ನಲ್ಲಿ ಕೊರೋನ ಸೋಂಕಿಗೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಾದ 2 ವಾರದ ಬಳಿಕ ಗರ್ಭದಲ್ಲಿದ್ದ ಶಿಶು ಮೃತಪಟ್ಟಿದೆ. ಮರುದಿನ ಡಿಂಪಲ್ ಕೂಡಾ ಕೊನೆಯುಸಿರೆಳೆದಿದ್ದಾರೆ. ಕೊನೆಯುಸಿರೆಳೆಯುವ ಮೊದಲು ಇವರು ತನ್ನ ಮನೆಯವರಿಗೆ ಮತ್ತು ಸ್ನೇಹಿತರಿಗೆ ವೀಡಿಯೊ ಮೂಲಕ ಸಂದೇಶ ರವಾನಿಸಿದ್ದಾರೆ.

ಅತ್ಯಂಕ ಕಷ್ಟದಿಂದ ಈ ವೀಡಿಯೊ ಮಾಡುತ್ತಿದ್ದೇನೆ. ದಯವಿಟ್ಟು ಕೊರೋನದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ದಯವಿಟ್ಟು ಮಾಸ್ಕ್ ಧರಿಸಿ. ಮನೆಯಲ್ಲಿರುವಾಗ, ಮನೆಯಿಂದ ಹೊರಗೆ ಹೋಗುವಾಗ, ಇತರರೊಂದಿಗೆ ಬೆರೆಯುವಾಗ, ನಿಮ್ಮ ಮತ್ತು ನಿಮ್ಮ ಆಪ್ತರ ಸುರಕ್ಷೆಗಾಗಿ ಮಾಸ್ಕ್ ಧಾರಣೆ ಅತ್ಯಗತ್ಯ ಎಂದು 2 ನಿಮಿಷ 20 ಸೆಕೆಂಡ್ನ ಈ ವೀಡಿಯೋದಲ್ಲಿ ವಿನಂತಿ ಮಾಡಿದ್ದಾರೆ.

ಈ ವೀಡಿಯೊವನ್ನು ಪತಿ ರವೀಶ್ ಚಾವ್ಲ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪತ್ನಿಯ ಅಂತಿಮ ಆಶಯವನ್ನು ಗೌರವಿಸುವ ಸಲುವಾಗಿ ವೀಡಿಯೊವನ್ನು ಶೇರ್ ಮಾಡಿಕೊಂಡಿರುವುದಾಗಿ ಚಾವ್ಲ ಹೇಳಿದ್ದಾರೆ. ಪತ್ನಿಯ ಅಂತಿಮ ದಿನಗಳ ಬಗ್ಗೆ ಉಲ್ಲೇಖಿಸಿರುವ ಚಾವ್ಲ, ಸೋಂಕು ದೃಢಪಟ್ಟ 10 ದಿನದ ಬಳಿಕ ಅವರ ದೇಹದಲ್ಲಿ ಆಮ್ಲಜನಕದ ಮಟ್ಟ ಕ್ಷೀಣಿಸುತ್ತಾ ಬಂದಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ರೆಮ್ಡೆಸಿವಿರ್ ಲಸಿಕೆಯ ಜೊತೆಗೆ ಎರಡು ಬಾರಿ ಪ್ಲಾಸ್ಮಾ ಚಿಕಿತ್ಸೆ ಒದಗಿಸಲಾಗಿದೆ. ಆದರೆ ಬಳಿಕ ಅವರ ಆರೋಗ್ಯಸ್ಥಿತಿ ಬಿಗಡಾಯಿಸಿತು ಎಂದು ರವೀಶ್ ಚಾವ್ಲ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಿದ್ದು ಮಗು ಗರ್ಭದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ  ಎಂದು ಚಾವ್ಲ ಹೇಳಿದ್ದಾರೆ. ದೇಶದಲ್ಲಿ ಗರ್ಭಿಣಿಯರು ಹಾಗೂ ಹೆರಿಗೆಯಾದ ಮಹಿಳೆಯರಿಗೆ ಇದುವರೆಗೆ ಲಸಿಕೆ ನೀಡುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News