ಕೋವಿಡ್ -19 ಕಾರಣದಿಂದ ಅನಾಥವಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ: ಮಧ್ಯಪ್ರದೇಶ ಸರಕಾರ
Update: 2021-05-13 15:16 IST
ಭೋಪಾಲ್: ಕೋವಿಡ್-19 ನಿಂದಾಗಿ ಪೋಷಕರನ್ನು ಅಥವಾ ಪಾಲಕರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ 5,000 ರೂ ಮಾಸಿಕ ಪಿಂಚಣಿ ನೀಡಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಪ್ರಕಟಿಸಿದರು.
"ನಾವು ಅಂತಹ ಕುಟುಂಬಗಳ ಕೈ ಬಿಡಲಾರೆವು. ರಾಜ್ಯ ಸರ್ಕಾರ ಹಾಗೂ ನಾವು ಈ ಮಕ್ಕಳ ಬೆಂಬಲಕ್ಕೆ ನಿಲ್ಲುತ್ತೇವೆ" ಎಂದು ಮಧ್ಯಪ್ರದೇಶ ಸಿಎಂ ಹೇಳಿದರು. ಅಂತಹ ಮಕ್ಕಳು ಚಿಂತಿಸಬೇಕಾಗಿಲ್ಲ, ಏಕೆಂದರೆ ಅವರು ರಾಜ್ಯದ ಮಕ್ಕಳಾಗಿದ್ದಾರೆ, ಹಾಗೂ ರಾಜ್ಯವು ಅವರ ಕಾಳಜಿ ವಹಿಸುತ್ತದೆ ಎಂದರು.
"ಈ ಕೋವಿಡ್ ಸಾಂಕ್ರಾಮಿಕ ರೋಗದಲ್ಲಿ ತಮ್ಮ ಪೋಷಕರು / ಪಾಲಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನಾವು ತಿಂಗಳಿಗೆ 5,000 ರೂ. ಪಿಂಚಣಿ ನೀಡುತ್ತೇವೆ. ಈ ಮಕ್ಕಳಿಗೆ ಉಚಿತ ಶಿಕ್ಷಣ ಹಾಗು ಈ ಕುಟುಂಬಗಳಿಗೆ ಉಚಿತ ಪಡಿತರವನ್ನು ಸಹ ನಾವು ವ್ಯವಸ್ಥೆಗೊಳಿಸುತ್ತೇವೆ" ಎಂದು ಅವರು ಹೇಳಿದರು.