ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ವೈದ್ಯಕೀಯ ವರದಿ ಸಲ್ಲಿಸಲು ಮಹಾರಾಷ್ಟ್ರಕ್ಕೆ ಹೈಕೋರ್ಟ್ ಆದೇಶ

Update: 2021-05-13 10:13 GMT

ಮುಂಬೈ: ಎಲ್ಗರ್-ಪರಿಷತ್ ಮಾವೋವಾದಿಗಳ ನಂಟು ಪ್ರಕರಣದ ಆರೋಪಿ ವಕೀಲೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರ ಇತ್ತೀಚಿನ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸುಧಾ ಅವರು ಪ್ರಸ್ತುತ ಮುಂಬೈನ ಬೈಕುಲಾದ ಮಹಿಳಾ ಜೈಲಿನಲ್ಲಿದ್ದಾರೆ.

ಜೈಲಿನಲ್ಲಿದ್ದಾಗ ಕೋವಿಡ್-19 ಸೋಂಕು  ತಗಲುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸುಧಾ ಅವರ ಮಗಳು ಮಾಯೇಶಾ ಸಿಂಗ್ ವೈದ್ಯಕೀಯ ಕಾರಣಗಳಿಗಾಗಿ ಸುಧಾ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್‌  ಅನ್ನು ಸಂಪರ್ಕಿಸಿದ್ದರು.

ಸುಧಾ ಅವರು ಮಧುಮೇಹ, ಹೃದ್ರೋಗದಿಂದ ಬಳಲುತ್ತಿದ್ದಾರೆ.  ಕ್ಷಯರೋಗವೂ ಅವರನ್ನು ಕಾಡುತ್ತಿದೆ.

ಭಾರದ್ವಾಜ್ ಅವರನ್ನು ಇತರ 50 ಮಹಿಳೆಯರೊಂದಿಗೆ ಅತ್ಯಂತ ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಜೈಲಿನ ವಾರ್ಡ್‌ನಲ್ಲಿ ಇರಿಸಲಾಗಿದೆ. ಎಲ್ಲರಿಗೂ  ಕೇವಲ ಮೂರು ಶೌಚಾಲಯಗಳಿವೆ ಎಂದು  ಭಾರದ್ವಾಜ್ ಪರ ವಕೀಲ ಯುಗ್ ಚೌಧರಿ ಅವರು ನ್ಯಾಯಮೂರ್ತಿಗಳಾದ ಕೆ. ಕೆ. ಟೇಟ್ ಮತ್ತು ಅಭಯ್ ಅಹುಜಾ ಅವರ ನ್ಯಾಯಪೀಠಕ್ಕೆ ತಿಳಿಸಿದರು.

ಭಾರದ್ವಾಜ್ ಅವರನ್ನು ಗುರುವಾರ ಸಂಜೆ ತಪಾಸಣೆಗಾಗಿ ಮುಂಬಯಿಯ ಜೆ ಜೆ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿದೆ. ಅವರಿಗೆ ಎರಡು ಬಾರಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಎರಡೂ ಬಾರಿಯೂ ನೆಗೆಟಿವ್ ವರದಿ ಬಂದಿದೆ ಎಂದು ರಾಜ್ಯದ ಪರ ವಕೀಲ ಜಯೇಶ್ ಯಾಗ್ನಿಕ್ ನ್ಯಾಯಪೀಠಕ್ಕೆ ತಿಳಿಸಿದರು.

 ಸರ್ಕಾರಿ ಜೆ ಜೆ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಭಾರದ್ವಾಜ್ ಅವರ ಕುರಿತ ವೈದ್ಯಕೀಯ ವರದಿಯನ್ನು ಮೇ 17 ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹೈಕೋರ್ಟ್ ಯಾಗ್ನಿಕ್ ಅವರಿಗೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News