×
Ad

ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದೂ ಜೈನ್ ಕೋವಿಡ್‌ಗೆ ಬಲಿ

Update: 2021-05-14 09:36 IST

ಹೊಸದಿಲ್ಲಿ, ಮೇ 14: ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಸಮೂಹದ ಅಧ್ಯಕ್ಷೆ ಇಂದೂ ಜೈನ್ ಗುರುವಾರ ರಾತ್ರಿ ಕೋವಿಡ್-19 ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.

ಹಲವು ಮಾನವ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಮಹಿಳಾ ಹಕ್ಕುಗಳ ಪ್ರತಿಪಾದಕಿಯಾಗಿದ್ದರು. ಆಧ್ಯಾತ್ಮಿಕ ಸಾಧನೆಯಲ್ಲಿ, ಕಲೆಗಳನ್ನು ಪೋಷಿಸುವಲ್ಲೂ ಗಣನೀಯ ಕೊಡುಗೆ ನೀಡಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವು ಮಂದಿ ಧಾರ್ಮಿಕ ಮುಖಂಡರು, ರಾಜತಾಂತ್ರಿಕರು, ಉದ್ಯಮ ಕ್ಷೇತ್ರದ ಗಣ್ಯರು ಇಂದೂ ಜೈನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಭಾರತದ ಅಭಿವೃದ್ಧಿಯ ವಿಚಾರದಲ್ಲಿ ಇಂದೂ ಜೈನ್ ಅಪಾರ ಆಸಕ್ತಿ ಹೊಂದಿದ್ದರು ಎಂದು ಮೋದಿ ಬಣ್ಣಿಸಿದ್ದಾರೆ.

ಪ್ರಾಚೀನ ಶಾಸ್ತ್ರಗಳಲ್ಲಿ ಮತ್ತು ನಂಬಿಕೆ ವ್ಯವಸ್ಥೆಯಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರು, 1999ರಿಂದೀಚೆಗೆ ಟೈಮ್ಸ್ ಸಮೂಹದ ಅಧ್ಯಕ್ಷೆಯಾಗಿ ಪೈಪೋಟಿಯುತ ಜಗತ್ತಿನಲ್ಲಿ ಸಮೂಹದ ಪತ್ರಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ಉತ್ತರ ಪ್ರದೇಶದ ಫೈಝಾಬಾದ್‌ನಲ್ಲಿ 1936ರಲ್ಲಿ ಜನಿಸಿದ ಅವರು, 1983ರಲ್ಲಿ ಎಫ್‌ಐಸಿಸಿಐ ಮಹಿಳಾ ವಿಭಾಗದ ಸಂಸ್ಥಾಪಕ ಅಧ್ಯಕ್ಷೆಯಾಗಿದ್ದರು. 1999ರಲ್ಲಿ ಟೈಮ್ಸ್ ಸಮೂಹದ ಅಧ್ಯಕ್ಷರಾಗಿ ಆಯ್ಕೆಯಾದ ಅವರು ಮರುವರ್ಷವೇ ಟೈಮ್ಸ್ ಫೌಂಡೇಶನ್ ರಚಿಸಿದ್ದರು. 1999ರಲ್ಲಿ ಭಾರತೀಯ ಜ್ಞಾನಪೀಠ ಟ್ರಸ್ಟ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಅವರು, ವಿಶ್ವಸಂಸ್ಥೆಯಲ್ಲಿ ಆಯೋಜಿಸಿದ್ದ ಸಹಸ್ರಮಾನದ ವಿಶ್ವ ಶಾಂತಿ ಶೃಂಗವನ್ನು ಉದ್ದೇಶಿಸಿ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News