ಆಕ್ಸಿಜನ್ ಮಾಸ್ಕ್ ಧರಿಸಿ ಆಸ್ಪತ್ರೆ ಬೆಡ್ ನಿಂದಲೇ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ ಕೇರಳದ ವಕೀಲ
ಹೊಸದಿಲ್ಲಿ : ತಾನು ಕೋವಿಡ್ ಸೋಂಕಿಗೊಳಗಾಗಿ ಸ್ವತಃ ಆಕ್ಸಿಜನ್ ಸಪೋರ್ಟ್ ನಲ್ಲಿದ್ದ ಹೊರತಾಗಿಯೂ ತನ್ನ ಕಕ್ಷಿಗಾರರ ಪರ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹೇಳಿಕೆ ನೀಡಿ ತನ್ನ ಕರ್ತವ್ಯಪರತೆ ಮೆರೆದ ಕೇರಳದ ಮಲಪ್ಪುರಂ ಮೂಲದ ಹಾಗೂ ಪ್ರಸ್ತುತ ದಿಲ್ಲಿಯಲ್ಲಿ ವಾಸವಾಗಿರುವ ವಕೀಲ ಸುಭಾಷ್ ಚಂದ್ರನ್ ಎಲ್ಲರಿಂದಲೂ ಶ್ಲಾಘನೆಗೊಳಗಾಗಿದ್ದಾರೆ.
ಎಪ್ರಿಲ್ 25ರಂದು ಚಂದ್ರನ್ ಅವರಿಗೆ ಕೋವಿಡ್ ದೃಢಪಟ್ಟಿತ್ತು. ದಿಲ್ಲಿಯಲ್ಲಿ ಅವರಿಗೆ ಆಸ್ಪತ್ರೆಗೆ ದಾಖಲಾಗುವುದು ಸಾಧ್ಯವಾಗಿಲ್ಲದೇ ಇದ್ದುದರಿಂದ ಅವರು ಹಿಮಾಚಲ ಪ್ರದೇಶದಲ್ಲಿರುವ ತಮ್ಮ ಪತ್ನಿಯ ಊರಿನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದು ಅವರ ಆಕ್ಸಿಜನ್ ಮಟ್ಟ ಇನ್ನೂ ಸಹಜತೆಗೆ ಮರಳಿಲ್ಲ.
ಸೌದಿ ಅರೇಬಿಯಾದಲ್ಲಿದ್ದ ಹಿಮಾಚಲ ಪ್ರದೇಶದ ವ್ಯಕ್ತಿಯೊಬ್ಬರು ಅಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ ನಂತರ ಕುಟುಂಬದ ಅನುಮತಿಯಿಲ್ಲದೆ ಅವರನ್ನು ಅಲ್ಲಿಯೇ ದಫನ ಮಾಡಲಾಗಿತ್ತು ಎಂದು ಅವರ ಕುಟುಂಬ ಆರೋಪಿಸಿ ಅವರ ಕಳೇಬರ ತಮಗೆ ಹಸ್ತಾಂತರಿಸಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕುಟುಂಬವನ್ನು ಪ್ರತಿನಿಧಿಸಲು ಚಂದ್ರನ್ ಮುಂದೆ ಬಂದಿದ್ದರಲ್ಲದೆ ಯಾವುದೇ ಶುಲ್ಕವನ್ನೂ ಅವರು ಪಡೆದುಕೊಳ್ಳುವುದಿಲ್ಲ ಎಂದಿದ್ದರು. ಆದರೆ ನಂತರ ಕೋವಿಡ್ ಸೋಂಕು ತಗಲಿ ಅವರು ಆಸ್ಪತ್ರೆಗೆ ದಾಖಲಾಗುವಂತಾಗಿತ್ತು.
ಈ ಪ್ರಕರಣದಲ್ಲಿ ನ್ಯಾಯಾಲಯ ತನ್ನ ತೀರ್ಪು ನೀಡಲಿದ್ದ ದಿನದಂದೇ ಸಂಬಂಧಿತ ಪ್ರಾಧಿಕಾರವು ಮೃತ ವ್ಯಕ್ತಿಯ ಕಳೇಬರವನ್ನು ಕುಟುಂಬಕ್ಕೆ ಹಸ್ತಾಂತರಿಸಿತ್ತು. ಆಕ್ಸಿಜನ್ ಮಾಸ್ಕ್ ಧರಿಸಿಕೊಂಡೇ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಂದ್ರನ್ ಆಸ್ಪತ್ರೆಯ ಬೆಡ್‍ನಿಂದಲೇ ಈ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಿದ್ದರು.
ಮಲಪ್ಪುರಂನ ಕುಟ್ಟಿಪ್ಪುರಂ ಮೂಲದವರಾದ ಚಂದ್ರನ್ ಅವರು ಕಳೆದ 12 ವರ್ಷಗಳಿಂದ ದಿಲ್ಲಿಯಲ್ಲಿ ವಾಸವಾಗಿದ್ದಾರೆ. ಈ ಹಿಂದೆ ಪತ್ರಕರ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದರು.