'ಲವ್ ಯು ಝಿಂದಗಿ' ಹಾಡಿಗೆ ತಲೆಯಲ್ಲಾಡಿಸಿ ಎಲ್ಲರಲ್ಲೂ ಆತ್ಮವಿಶ್ವಾಸ ಮೂಡಿಸಿದ್ದ ಕೋವಿಡ್ ಸೋಂಕಿತೆ ಸಾವು

Update: 2021-05-14 13:42 GMT

ಹೊಸದಿಲ್ಲಿ: ʼಡಿಯರ್ ಜಿಂದಗಿʼ ಚಿತ್ರದ ಜನಪ್ರಿಯ ಹಾಡಿನ ತಾಳಕ್ಕೆ ತಕ್ಕಂತೆ ಆಕ್ಸಿಜನ್ ಮಾಸ್ಕ್ ಹಾಕಿಕೊಂಡೇ  ದಿಲ್ಲಿಯ ಆಸ್ಪತ್ರೆಯೊಂದರ ಕೋವಿಡ್ ಎಮರ್ಜನ್ಸಿ ವಾರ್ಡಿನ ತನ್ನ ಬೆಡ್ ಮೇಲೆ ಕುಳಿತುಕೊಂಡು ತನ್ಮಯತೆಯ್ದಿಂದ ತಲೆಯಲ್ಲಾಡಿಸಿದ್ದ 30 ವರ್ಷದ ಕೋವಿಡ್ ಪಾಸಿಟಿವ್ ಮಹಿಳೆಯೊಬ್ಬರ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಆಕೆ ಅತಿ ಶೀಘ್ರ ಗುಣಮುಖವಾಗಲಿ ಎಂದು ಟ್ವಿಟ್ಟರಿಗರು ಹಾರೈಸಿದ್ದರು. ಆದರೆ ಆ ಮಹಿಳೆ  ಬುಧವಾರ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಡಾ. ಮೋನಿಕಾ ಲಂಗೇಹ್ ಎಂಬವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ʼಐ ಯಾಮ್ ವೆರಿ ಸಾರಿ, ವಿ ಲಾಸ್ಟ್ ದಿ ಬ್ರೇವ್ ಗರ್ಲ್ʼ ಎಂದು ಅವರು ಬರೆದಿದ್ದಾರೆ.

"ಆ ಮಹಿಳೆಗೆ ಆರಂಭದಲ್ಲಿ ಆಸ್ಪತ್ರೆಯಲ್ಲಿ ಬೆಡ್ ದೊರಕಿರಲಿಲ್ಲ. ನಂತರ ಆಕೆಯನ್ನು ಐಸಿಯು ವಾರ್ಡಿಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಯ ಸ್ಥಿತಿ ಅಷ್ಟೊಂದು ಸ್ಥಿರವಾಗಿಲ್ಲ," ಎಂದು ಈ ಹಿಂದೆ ಬರೆದಿದ್ದ ಡಾ ಮೋನಿಕಾ "ಆಕೆಗಾಗಿ ಆಕೆಯ ಪುಟ್ಟ ಮಗು ಮನೆಯಲ್ಲಿ ಕಾದಿದೆ, ಆಕೆಗಾಗಿ ಪ್ರಾರ್ಥಿಸಿ ಆಕೆ ದಿಟ್ಟ ಯುವತಿ,'' ಎಂದೂ ಬರೆದಿದ್ದರು. ಆದರೆ ಇದೀಗ ಆಕೆಯ ಸಾವು ತಮಗೆ ಆಘಾತ ನೀಡಿದೆ ಎಂದು ಹಲವು ಟ್ವಿಟ್ಟರಿಗರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News