ಕೋವಿಡ್-19:ಹೊಸ ಸೋಂಕು ಪ್ರಕರಣಗಳನ್ನು ಮೀರಿಸಿದ ಚೇತರಿಕೆ ಪ್ರಕರಣಗಳ ಸಂಖ್ಯೆ

Update: 2021-05-14 16:12 GMT

ಹೊಸದಿಲ್ಲಿ,ಮೇ 14: ಶುಕ್ರವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಕೋವಿಡ್-19ರಿಂದ ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ ಹೊಸ ದೈನಂದಿನ ಪ್ರಕರಣಗಳನ್ನು ಮೀರಿಸಿದ್ದು,ಗುಣಮುಖಗೊಂಡವರ ಒಟ್ಟು ಸಂಖ್ಯೆ ಎರಡು ಕೋಟಿಯನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ಗುಣಮುಖಗೊಂಡವರ ಸಂಖ್ಯೆ ಹೊಸ ಸೋಂಕು ಪ್ರಕರಣಗಳಿಗಿಂತ ಹೆಚ್ಚಿರುವುದು ಇದು ಮೂರನೇ ಸಲವಾಗಿದೆ.

 
3,43,144 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದರೆ,3,44,776 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಗುಣಮುಖಗೊಂಡವರ ಒಟ್ಟು ಸಂಖ್ಯೆ 2,00,79,599ಕ್ಕೆ ತಲುಪಿದೆ. ಹೊಸ ಕೊರೋನವೈರಸ್ ಪ್ರಕರಣಗಳಲ್ಲಿ ಹತ್ತು ರಾಜ್ಯಗಳ ಪಾಲು ಶೇ.71.16ರಷ್ಟಿದೆ. 42,582 ದೈನಂದಿನ ಹೊಸ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದ್ದರೆ,ನಂತರದ ಸ್ಥಾನಗಳಲ್ಲಿ ಕೇರಳ (39,955) ಮತ್ತು ಕರ್ನಾಟಕ (35,297) ಇವೆ. ಈ ಅವಧಿಯಲ್ಲಿ ದೇಶದಲ್ಲಿ ಒಟ್ಟು 4,000 ಸಾವುಗಳು ಸಂಭವಿಸಿದ್ದು,ಇದರಲ್ಲಿ ಹತ್ತು ರಾಜ್ಯಗಳ ಪಾಲು ಶೇ.72.70ರಷ್ಟಿದೆ. ಗರಿಷ್ಠ 850 ಸಾವುಗಳು ಮಹಾರಾಷ್ಟ್ರದಲ್ಲಿ ಸಂಭವಿಸಿದ್ದು,344 ಸಾವುಗಳೊಡನೆ ಕರ್ನಾಟಕ ನಂತರದ ಸ್ಥಾನದಲ್ಲಿದೆ.

ದೇಶದಲ್ಲಿ ಈವರೆಗೆ ನಡೆಸಲಾಗಿರುವ ಕೋವಿಡ್-19 ಪರೀಕ್ಷೆಗಳ ಒಟ್ಟು ಸಂಖ್ಯೆ 31 ಕೋ.ಗೂ ಅಧಿಕವಾಗಿದ್ದು,ಒಟ್ಟು ಪಾಸಿಟಿವಿಟಿ ದರವು ಶೇ.7.72ಕ್ಕೇರಿಕೆಯಾಗಿದೆ,ಆದರೆ ದೈನಂದಿನ ಪಾಸಿಟಿವಿಟಿ ದರವು ಶೇ.20.08ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ದೇಶದಲ್ಲಿಯ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 37,04,893ಕ್ಕೆ ಇಳಿದಿದ್ದು,ಇದು ಒಟ್ಟು ಪ್ರಕರಣಗಳ ಶೇ.15.41ರಷ್ಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 5,632 ಪ್ರಕರಣಗಳ ನಿವ್ವಳ ಇಳಿಕೆ ದಾಖಲಾಗಿದೆ. ರಾಷ್ಟ್ರೀಯ ಸಾವಿನ ದರವು ಈಗ ಶೇ.1.09ರಷ್ಟಿದೆ ಎಂದು ತಿಳಿಸಿರುವ ಸಚಿವಾಲಯವು,ಶುಕ್ರವಾರ ಬೆಳಿಗ್ಗೆ ಏಳು ಗಂಟೆಯ ವರದಿಯಂತೆ ದೇಶದಲ್ಲಿ ಈವರೆಗೆ 17,92,98,584 ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News