×
Ad

ತೌಕ್ತೆ ಚಂಡಮಾರುತ:ಕರ್ನಾಟಕ ಸೇರಿದಂತೆ ಐದು ಕರಾವಳಿ ರಾಜ್ಯಗಳಿಗೆ ಎಚ್ಚರಿಕೆ, 53 ಎನ್ ಡಿಆರ್ ಎಫ್ ತಂಡಗಳು ಸಜ್ಜು

Update: 2021-05-14 23:04 IST

ಹೊಸದಿಲ್ಲಿ,ಮೇ 14: ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇ 16ರ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ,ಮಹಾರಾಷ್ಟ್ರ,ಗುಜರಾತ್,ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶುಕ್ರವಾರ ಎಚ್ಚರಿಕೆಗಳನ್ನು ಹೊರಡಿಸಿದೆ.

‘ತೌಕ್ತೆ ’ಚಂಡಮಾರುತದ ಸಂಭಾವ್ಯ ಪರಿಣಾಮಗಳನ್ನು ಎದುರಿಸಲು ತಲಾ 40 ಸಿಬ್ಬಂದಿಗಳ 53 ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಈ ಪೈಕಿ 24 ತಂಡಗಳು ಈಗಾಗಲೇ ಈ ರಾಜ್ಯಗಳಲ್ಲಿಯ ನಿಗದಿತ ತಾಣಗಳಲ್ಲಿ ಸ್ಥಿತಗೊಂಡಿದ್ದು,ಉಳಿದ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್ಡಿಆರ್ ಎಫ್)ಯ ಮಹಾನಿರ್ದೇಶಕ ಎಸ್.ಎನ್.ಪ್ರಧಾನ್ ಅವರು ಟ್ವೀಟಿಸಿದ್ದಾರೆ.

ಆಗ್ನೇಯ ಅರಬಿ ಸಮುದ್ರದಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಲಕ್ಷದ್ವೀಪ ಪ್ರದೇಶದಲ್ಲಿ ಗುರುವಾರ ವಾಯುಭಾರ ಕುಸಿತ ಉಂಟಾಗಿದ್ದು,‌ ಶನಿವಾರ ಬೆಳಿಗ್ಗೆ ತೀವ್ರತೆಯನ್ನು ಪಡೆದುಕೊಳ್ಳಲಿದೆ ಮತ್ತು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ ಎಂದು ತನ್ನ ಎಚ್ಚರಿಕೆ ವರದಿಯಲ್ಲಿ ತಿಳಿಸಿರುವ ಐಎಂಡಿ,ಅದು ಇನ್ನಷ್ಟು ತೀವ್ರಗೊಂಡು ಗುಜರಾತ್ ಮತ್ತು ಪಾಕಿಸ್ತಾನ ತೀರಗಳತ್ತ ಸಾಗಲಿದೆ. ಮೇ 18ರ ಸಂಜೆಯ ವೇಳೆಗೆ ಅದು ಗುಜರಾತ್ ತೀರದ ಸಮೀಪ ತಲುಪುವ ಸಾಧ್ಯತೆಯಿದೆ ಎಂದಿದೆ.
ಮ್ಯಾನ್ಮಾರ್ ನೀಡಿರುವ ತೌಕ್ತೆ (ಹಲ್ಲಿ) ಹೆಸರನ್ನು ಭಾರತದ ಕರಾವಳಿಯಲ್ಲಿನ ಈ ವರ್ಷದ ಮೊದಲ ಚಂಡಮಾರುತಕ್ಕೆ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News