ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಪೋಸ್ಟರ್‌ಗಳನ್ನು ಅಂಟಿಸಿದ್ದ 15 ಜನರ ಬಂಧನ

Update: 2021-05-15 13:02 GMT

ಹೊಸದಿಲ್ಲಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ನಿಭಾಯಿಸಿದ್ದನ್ನು ಟೀಕಿಸಿರುವ  ಪೋಸ್ಟರ್ ಗಳನ್ನು ನಗರದಾದ್ಯಂತ ಅಂಟಿಸಿದ ಆರೋಪದಲ್ಲಿ ರಾಜಧಾನಿಯ ವಿವಿಧ ಭಾಗಗಳಲ್ಲಿ ಕನಿಷ್ಠ 15 ಜನರನ್ನು ಬಂಧಿಸಲಾಗಿದೆ ಹಾಗೂ  ಅನೇಕ ಎಫ್ಐಆರ್ ಗಳನ್ನು ದಾಖಲಿಸಲಾಗಿದೆ.

"ಮೋದಿಜಿ ಹಮಾರೆ ಬಚ್ಚೋಂಕಿ ವ್ಯಾಕ್ಸಿನ್ ವಿದೇಶ್ ಕ್ಯೋ ಬೇಜ್ ದಿಯಾ (ಮೋದಿಜಿ, ನೀವು ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಗಳಿಗೆ ಏಕೆ ಕಳುಹಿಸಿದ್ದೀರಿ?)" ಎಂದು ಬರೆದಿರುವ ಪೋಸ್ಟರ್‌ಗಳನ್ನು ನಗರದ ಹಲವಾರು ಭಾಗಗಳಲ್ಲಿ ಅಂಟಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪೊಲೀಸರು  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188  ಹಾಗೂ ಸೆಕ್ಷನ್ 3 ಸೇರಿದಂತೆ ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ 17 ಎಫ್ಐಆರ್ ಗಳನ್ನು ನೋಂದಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, "ಈ ನಿಟ್ಟಿನಲ್ಲಿ ಹೆಚ್ಚಿನ ದೂರುಗಳು ಬಂದರೆ ಹೆಚ್ಚಿನ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ. ಈಗಿನಂತೆ, ಈ ಪೋಸ್ಟರ್‌ಗಳನ್ನು ಯಾರ ಪರವಾಗಿ ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ಹಾಕಲಾಗುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

, ಈಶಾನ್ಯ ದಿಲ್ಲಿಯಲ್ಲಿ ಮೂರು ಎಫ್‌ಐಆರ್ ದಾಖಲಿಸಲಾಗಿದೆ ಹಾಗೂ  ಅಲ್ಲಿಂದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ದಿಲ್ಲಿದಲ್ಲಿ ಮೂರು ಎಫ್‌ಐಆರ್‌ಗಳು ಹಾಗೂ  ದಿಲ್ಲಿ ಯ ಹೊರಗೆ ಇನ್ನೂ ಮೂರು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ನಗರದ ಮಧ್ಯ ಭಾಗದಲ್ಲಿ ಎರಡು ಎಫ್‌ಐಆರ್ ದಾಖಲಿಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ರೋಹಿಣಿ ಪ್ರದೇಶದಲ್ಲಿ ಇಬ್ಬರು ವಿರುದ್ದ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಪೂರ್ವ ದಿಲ್ಲಿಯಲ್ಲಿ ಒಂದು ಎಫ್‌ಐಆರ್ ದಾಖಲಿಸಲಾಗಿದೆ ಹಾಗೂ  ನಾಲ್ವರನ್ನು ಬಂಧಿಸಲಾಗಿದೆ. ದ್ವಾರಕಾದಲ್ಲಿ ಒಂದು ಎಫ್‌ಐಆರ್ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ದಿಲ್ಲಿಯಲ್ಲಿ ಒಂದು ಎಫ್‌ಐಆರ್ ದಾಖಲಾಗಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

 ಈ ಪೋಸ್ಟರ್‌ಗಳನ್ನು ಅಂಟಿಸಲು ತನಗೆ 500 ರೂ. ನೀಡಲಾಗಿದೆ ಎಂದು ಓರ್ವ  ಹೇಳಿದ್ದಾನೆ. ಶಹದ್ರಾದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News