ಮೋದಿ ಸರಕಾರಕ್ಕೆ 7 ವರ್ಷ ತುಂಬುವ ಹಿನ್ನೆಲೆ: ಮೇ 26ರಂದು ಕರಾಳ ದಿನಾಚರಣೆ; ಪ್ರತಿಭಟನಾ ನಿರತ ರೈತರ ನಿರ್ಧಾರ

Update: 2021-05-15 17:09 GMT
ಫೈಲ್ ಫೋಟೊ

ಹೊಸದಿಲ್ಲಿ, ಮೇ 15: ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯ ಗಡಿಭಾಗದಲ್ಲಿ ತಾವು ಹಮ್ಮಿಕೊಂಡಿರುವ ಪ್ರತಿಭಟನೆ 6 ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಮೇ 26ರಂದು ಕರಾಳ ದಿನಾಚರಣೆ ನಡೆಸಲಾಗುವುದು ಎಂದು ಪ್ರತಿಭಟನಾ ನಿರತ ರೈತ ಮುಖಂಡರು ಹೇಳಿದ್ದಾರೆ.

ಮೇ 26ರಂದು ಪ್ರತಿಭಟನಾ ನಿರತ ರೈತರು ತಮ್ಮ ಮನೆ, ವಾಹನ ಮತ್ತು ಅಂಗಡಿಯೆದುರು ಕಪ್ಪು ಬಾವುಟ ಹಾರಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಛಾದ ಮುಖಂಡರು ಘೋಷಿಸಿದ್ದಾರೆ. ನಮ್ಮ ಪ್ರತಿಭಟನೆ ಆರಂಭವಾಗಿ ಮೇ 26ಕ್ಕೆ ಆರು ತಿಂಗಳು ಪೂರ್ತಿಯಾಗುತ್ತದೆ. ಈ ದಿನವೇ ಮೋದಿ ಸರಕಾರಕ್ಕೆ 7 ವರ್ಷ ತುಂಬುತ್ತದೆ. ಈ ದಿನವನ್ನು ನಾವು ಕರಾಳ ದಿನವಾಗಿ ಆಚರಿಸಲಿದ್ದೇವೆ ಎಂದು ರೈತರ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. 

ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬ ರೈತರ ಬೇಡಿಕೆಗೆ ಸರಕಾರ ಕಿವಿಗೊಡುತ್ತಿಲ್ಲ. ರಸಗೊಬ್ಬರ, ಡೀಸೆಲ್, ಪೆಟ್ರೋಲ್ ಬೆಲೆ ನಿರಂತರ ಹೆಚ್ಚುತ್ತಿರುವುದರಿಂದ ಕೃಷಿ ಕೆಲಸ ನಡೆಸುವುದೇ ಅಸಾಧ್ಯವಾಗಿದೆ. ಆದ್ದರಿಂದ ರೈತರು ಮಾತ್ರವಲ್ಲ, ದೇಶದ ಇತರ ಪ್ರಜೆಗಳೂ ಕರಾಳ ದಿನಾಚರಣೆಗೆ ಕೈಜೋಡಿಸಬೇಕು. ದೇಶದ ಜನರು ತಮ್ಮ ಮನೆ, ಅಂಗಡಿ, ಲಾರಿ ಹಾಗೂ ಇತರ ವಾಹನಗಳ ಮೇಲೆ ಮೇ 26ರಂದು ಕಪ್ಪು ಬಾವುಟ ಹಾರಿಸುವಂತೆ ಮನವಿ ಮಾಡುತ್ತೇವೆ. ಪ್ರತಿಭಟನೆಯ ಅಂಗವಾಗಿ ಪ್ರಧಾನಿ ಮೋದಿಯ ಪ್ರತಿಕೃತಿ ದಹಿಸಲಾಗುವುದು ಎಂದು ರಾಜೇವಾಲ್ ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News