ಕೋವಿಡ್ ನಂತರ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚುತ್ತಿವೆ:ಏಮ್ಸ್ ಮುಖ್ಯಸ್ಥ

Update: 2021-05-15 17:12 GMT

  ಹೊಸದಿಲ್ಲಿ,ಮೇ 15: ಮ್ಯುಕರ್ಮೈಕೊಸಿಸ್ ಎಂದು ಕರೆಯಲಾಗುವ ಕಪ್ಪು ಶಿಲೀಂಧ್ರ ಸೋಂಕು ಹೊಸದೇನಲ್ಲ,ಅದು ಕೋವಿಡ್ಗೆ ಮೊದಲೂ ಇತ್ತು. ಆದರೆ ಕೋವಿಡ್-19 ಮತ್ತು ಅದರ ಚಿಕಿತ್ಸೆಯಿಂದಾಗಿ ಪ್ರಕರಣಗಳ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಳವಾಗಿದೆ ಎಂದು ಏಮ್ಸ್ ಮುಖ್ಯಸ್ಥ ಡಾ.ರಣದೀಪ ಗುಲೆರಿಯಾ ಅವರು ಶನಿವಾರ ಇಲ್ಲಿ ತಿಳಿಸಿದರು.

ಈ ಶಿಲೀಂಧ್ರದ ಬೀಜಾಣುಗಳು ಗಾಳಿಯಲ್ಲಿ,ಮಣ್ಣಿನಲ್ಲಿ ಮತ್ತು ಕೆಲವೊಮ್ಮೆ ಆಹಾರದಲ್ಲಿಯೂ ಇರುತ್ತವೆ,ಆದರೆ ಅವುಗಳ ಉಗ್ರತೆ ಕಡಿಮೆಯಿರುತ್ತದೆ ಎಂದು ಅವರು,ಹೀಗಾಗಿ ಮಾಸ್ಕ್ಗಳನ್ನು,ವಿಶೇಷವಾಗಿ ಕಟ್ಟಡ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿದಾಗ ಧರಿಸುವುದು ತುಂಬ ಮುಖ್ಯವಾಗಿದೆ ಎಂದರು. ದಿಲ್ಲಿಯ ಏಮ್ಸ್ನಲ್ಲಿ 23 ಕಪ್ಪು ಶಿಲೀಂಧ್ರ ಪ್ರಕರಣಗಳಿದ್ದು,ಈ ಪೈಕಿ 20 ರೋಗಿಗಳಲ್ಲಿ ಈಗಲೂ ಕೋವಿಡ್-19 ಸೋಂಕು ಇದೆ ಎಂದು ತಿಳಿಸಿದರು.
ಕೆಲವು ರಾಜ್ಯಗಳಲ್ಲಿ 400ರಿಂದ 500 ಕಪ್ಪು ಶಿಲೀಂಧ್ರ ಪ್ರಕರಣಗಳು ದಾಖಲಾಗಿವೆ ಎಂದು ಅವರು ಸೋಂಕನ್ನು ನಿಯಂತ್ರಿಸಲು ಹೆಚ್ಚಿನ ಗಮನ ನೀಡುವಂತೆ ಆಸ್ಪತ್ರೆಗಳನ್ನು ಆಗ್ರಹಿಸಿದರು. ಸೆಕೆಂಡರಿ ಹಂತದ ಶಿಲೀಂಧ್ರ ಸೋಂಕು ಹೆಚ್ಚು ಅನಾರೋಗ್ಯ ಮತ್ತು ಸಾವುಗಳನ್ನುಂಟು ಮಾಡುತ್ತದೆ ಎಂದರು.
2003ರಲ್ಲಿ ಸಾರ್ಸ್ ಸಾಂಕ್ರಾಮಿಕ ಭುಗಿಲೆದ್ದಾಗಲೂ ಕಪ್ಪು ಶಿಲೀಂಧ್ರ ಸೋಂಕು ವರದಿಯಾಗಿತ್ತು ಎಂದ ಅವರು,ಕೋವಿಡ್ ಸೋಂಕು,ಮಧುಮೇಹ ಮತ್ತು ಕೋವಿಡ್ ಚಿಕಿತ್ಸೆ ಸಂದರ್ಭ ಸ್ಟಿರಾಯ್ಡಿಗಳ ದುರ್ಬಳಕೆ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿವೆ ಎಂದರು.
ಕೋವಿಡ್ಗಿಂತ ಮೊದಲು ಈ ಸೋಂಕು ಅನಿಯಂತ್ರಿತ ರಕ್ತದೊತ್ತಡ ಮಟ್ಟಗಳೊಂದಿಗೆ ಮಧುಮೇಹ ರೋಗಿಗಳಲ್ಲಿ ಅಥವಾ ಕಿಮೊಥೆರಪಿಗೊಳಗಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಕೋವಿಡ್ನಿಂದಾಗಿ ಈ ಸೋಂಕು ಈಗ ಸಾಮಾನ್ಯವಾಗಿದೆ ಎಂದರು.
ಸೋಂಕಿನಲ್ಲಿ ಎರಡು ವಿಧಗಳಿವೆ. ಒಂದು ಮುಖ,ಮೂಗು ಮತ್ತು ಮಿದುಳಿನ ಭಾಗಗಳನ್ನು ಬಾಧಿಸುತ್ತದೆ ಮತ್ತು ಇನ್ನೊಂದು ಶ್ವಾಸಕೋಶಗಳನ್ನು ಸೋಂಕಿಗೆ ಗುರಿಯಾಗಿಸುತ್ತದೆ. ಮುನ್ನೆಚ್ಚರಿಕೆ ಈ ರೋಗವನ್ನು ತಡೆಯುವಲ್ಲಿ ಮುಖ್ಯವಾಗಿದೆ ಎಂದು ಗುಲೆರಿಯಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News