ಬ್ಲ್ಯಾಕ್ ಫಂಗಸ್ ಸೋಂಕು ಅಧಿಸೂಚಿತ ರೋಗ: ಹರ್ಯಾಣ ಘೋಷಣೆ

Update: 2021-05-15 17:56 GMT

ಚಂಡೀಗಢ, ಮೇ 15: ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಸೋಂಕನ್ನು ಅಧಿಸೂಚಿತ ರೋಗ ಎಂದು ಹರ್ಯಾನ ಸರಕಾರ ಘೋಷಿಸಿದೆ. ಇದರೊಂದಿಗೆ ಪತ್ತೆಯಾದ ಪ್ರತೀ ಪ್ರಕರಣದ ಬಗ್ಗೆಯೂ ಸರಕಾರಿ ಅಧಿಕಾರಿ, ಪ್ರಾಧಿಕಾರಕ್ಕೆ ಮಾಹಿತಿ ನೀಡುವುದು ಅನಿವಾರ್ಯವಾಗಲಿದ್ದು ಈ ಮೂಲಕ ಫಂಗಸ್ನ ಪತ್ತೆ ಮತ್ತು ನಿರ್ವಹಣೆ ಕಾರ್ಯ ಸುಲಭವಾಗಲಿದೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಪತ್ತೆಯಾಗುವ ಬ್ಲ್ಯಾಕ್ ಫಂಗಸ್ ಬಗ್ಗೆ ವೈದ್ಯರು ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗೆ ವರದಿ ಸಲ್ಲಿಸಬೇಕಾಗಿದೆ ಎಂದು ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಶನಿವಾರ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕೊರೋನ ಸೋಂಕಿನ ಚಿಕಿತ್ಸೆ ಒದಗಿಸುತ್ತಿರುವ ವೈದ್ಯರೊಂದಿಗೆ ಬ್ಲ್ಯಾಕ್ ಫಂಗಸ್ನ ಚಿಕಿತ್ಸೆಯ ಕುರಿತು ರೋಹ್ಟಕ್ನ ಪಂಡಿತ್ ಭಗವತ್ದಯಾಳ್ ಶರ್ಮ ಸ್ನಾತಕೋತ್ತರ ವೈದ್ಯವಿಜ್ಞಾನ ಸಂಸ್ಥೆಯ ಹಿರಿಯ ವೈದ್ಯರು ವೀಡಿಯೊ ಕಾನ್ಪರೆನ್ಸಿಂಗ್ ನಡೆಸಲಿದ್ದಾರೆ ಎಂದವರು ಹೇಳಿದ್ದಾರೆ.

ಅಧಿಸೂಚಿತ ರೋಗ ಎಂದು ಘೋಷಿತವಾದರೆ ಆ ಸೋಂಕಿನ ಕುರಿತ ಮಾಹಿತಿಯನ್ನು ಸಂಗ್ರಹಿಸಲು, ರೋಗದ ಬಗ್ಗೆ ನಿಗಾ ವಹಿಸಲು ಹಾಗೂ ಸೂಕ್ತ ಮುನ್ನೆಚ್ಚರಿಕೆ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತದೆ. ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ ಅಥವಾ ಮ್ಯೂಕೋರ್ಮೈಕೋಸಿಸ್) ಎಂಬ ಅಪರೂಪದ ಆದರೆ ಅತ್ಯಂತ ಅಪಾಯಕಾರಿಯಾದ ಶಿಲೀಂಧ್ರ ಸೋಂಕು ರೋಗ ಕೊರೋನ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ಮೂಗು ಕಟ್ಟಿರುವುದು ಅಥವಾ ಭಾಗಶಃ ದೃಷ್ಟಿ ಕಳೆದುಕೊಳ್ಳುವುದು ಈ ಸೋಂಕಿನ ಲಕ್ಷಣವಾಗಿದೆ. 

ಮೆದುಳು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದರಿಂದ ಮಧುಮೇಹ ರೋಗಿಗಳು ಅಥವಾ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದರಿಂದ ಪ್ರಾಣಕ್ಕೆ ಅಪಾಯ ಬರಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಹೇಳಿದೆ. ದೇಶದಲ್ಲಿ ಈ ಸೋಂಕು ರೋಗದ ವ್ಯಾಪಕತೆಯ ಬಗ್ಗೆ ಸ್ಪಷ್ಟ ಅಂಕಿಅಂಶ ಲಭ್ಯವಾಗಿಲ್ಲ. ಆದರೂ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಸೋಂಕಿನ ಪ್ರಮಾಣ 70 ಪಟ್ಟು ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಹರ್ಯಾನದಲ್ಲಿ ಬ್ಲ್ಯಾಕ್ ಫಂಗಸ್ನ 40ಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ ಎಂದು ಹರ್ಯಾನ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಸೆಲ್ಜ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News