ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಮುಕ್ತಗೊಳಿಸುವ ಬೇಡಿಕೆ ʼಅಸಂಬದ್ಧʼ: ತಮಿಳುನಾಡು ಹಣಕಾಸು ಸಚಿವ ತ್ಯಾಗರಾಜನ್

Update: 2021-05-16 08:23 GMT
PHOTO: TWITTER

ಚೆನ್ನೈ: "ದೇವಾಲಯಗಳನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಮುಕ್ತಗೊಳಿಸುವಂತೆ ಕೆಲವರು ಬೇಡಿಕೆ ಇಡುತ್ತಿದ್ದಾರೆ. ಈ ಬೇಡಿಕೆಯು ಅಸಂಬದ್ಧವಾಗಿದೆ ಎಂದು ತಮಿಳುನಾಡಿನ ನೂತನ ಹಣಕಾಸು ಮಂತ್ರಿ ಪಳನಿವೇಲ್‌ ತ್ಯಾಗರಾಜನ್‌ ಹೇಳಿಕೆ ನೀಡಿದ್ದಾರೆ. ಮಧುರೈ ಮೀನಾಕ್ಷಿ ದೇವಿಯ ಭಕ್ತರೂ ಆಗಿರುವ ಅವರು ಈ ಕುರಿತಾದ ಬೇಡಿಕೆಗಳನ್ನು ತಳ್ಳಿ ಹಾಕಿದ್ದಾರೆ.

ಕೆಲವು ವ್ಯಕ್ತಿಗಳು ಕೆಲವು ಸಂದರ್ಭಗಳಲ್ಲಿ ಸದ್ದು ಮಾಡುತ್ತಿರುತ್ತಾರೆ. ಇವರು ಸಮಾಜದ ಉತ್ತಮ ಹೆಸರನ್ನು ಕೆಡಿಸಲು ಯತ್ನಿಸುತ್ತಾರೆ ಎಂದು THE HINDU ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. ಈ ಕುರಿತಾದಂತೆ ಇಶಾ ಯೋಗ ಕೇಂದ್ರದ ಸ್ಥಾಪಕ ಜಗ್ಗಿ ವಾಸುದೇವ ಸೇರಿದಂತೆ ಹಲವು ವ್ಯಕ್ತಿಗಳು ಬೇಡಿಕೆಯಿಟ್ಟಿರುವ ಕುರಿತು ಅವರನ್ನು ಕೇಳಿದಾಗ, "ಜಗ್ಗಿಯ ವಿಚಾರದಲ್ಲಿ, ಹಣ ಗಳಿಸಲು ವಿವಿಧ ಆಯಾಮಗಳನ್ನು ಹುಡುಕುವ ಅವರೋರ್ವ ಪ್ರಚಾರಪ್ರಿಯ ವ್ಯಕ್ತಿಯಾಗಿದ್ದಾರೆ ಎಂದು ತ್ಯಾಗರಾಜನ್‌ ಹೇಳಿಕೆ ನೀಡಿದ್ದಾರೆ.

ದೇವತಾ ಮನುಷ್ಯ ಎಂದು ಕರೆಸಿಕೊಳ್ಳುವ ವ್ಯಕ್ತಿ, ದೇವರನ್ನೇ ಧ್ಯಾನ ಮಾಡುವವನಾಗಿದ್ದರೆ ಆತ ಶಿವರಾತ್ರಿಯ ದಿನದಂದು 5,00,000 ರೂ., 50,000ರೂ. ಮತ್ತು 5,000ರೂ.ಯ ಟಿಕೆಟ್‌ ಇಡುತ್ತಿರಲಿಲ್ಲ. ಇದು ಓರ್ವ ದೇವಮಾನವನ ಲಕ್ಷಣವೇ? ಓರ್ವ ಆಧ್ಯಾತ್ಮಿಕ ವ್ಯಕ್ತಿಯನ್ನು ಇದರಿಂದ ಗುರುತು ಹಚ್ಚಲು ಸಾಧ್ಯವೇ? ಆತ ಓರ್ವ ದೇವರು ಮತ್ತು ಧರ್ಮವನ್ನು ಹಿಡಿದುಕೊಂಡು ವ್ಯವಹಾರ ನಡೆಸುವ ಮನುಷ್ಯನಷ್ಟೇ ಎಂದು ತ್ಯಾಗರಾಜನ್‌ ಆರೋಪಿಸಿದ್ದಾರೆ.

ಕೊಯಂಬತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಏನು ನಡೆಯುತ್ತಿದೆ ಎಂಬುವುದರ ಕುರಿತಾದಂತೆ ತನಿಖೆ ನಡೆಸುವುದಾಗಿ ಧಾರ್ಮಿಕ ದತ್ತಿ ಇಲಾಖೆಗಳ ಸಚಿವ ಪಿಕೆ ಸೇಕರ್‌ ಬಾಬು ಘೋಷಿಸಿದ್ದರು. "ಈ ಯೋಗ ಕೇಂದ್ರದಲ್ಲಿ ಅವ್ಯವಹಾರಗಳು, ಉಲ್ಲಂಘನೆಗಳು ಅಥವಾ ಸಮಸ್ಯೆಗಳಿವೆಯೇ ಎನ್ನುವುದರ ಕುರಿತು ಅವರು ತನಿಖೆ ನಡೆಸಲಿದ್ದಾರೆ. ಕೆಲವು ಗಂಭೀರ ಸಮಸ್ಯೆಗಳ ಕುರಿತು ಅವರು ಪರಿಶೀಲನೆ ನಡೆಸಲಿದ್ದಾರೆ" ಎಂದು ತ್ಯಾಗರಾಜನ್‌ ಹೇಳಿದರು.

ದೇವಾಲಯಗಳನ್ನು ನಡೆಸಲು ಭಕ್ತರಿಗೆ ಅವಕಾಶ ನೀಡಬೇಕು ಎಂಬ ವಾದನ್ನು ತಿರಸ್ಕರಿಸಿದ ಅವರು, ನೀವು ದೇವಾಲಯಗಳನ್ನು ಭಕ್ತರಿಗೆ ನೀಡಿ ಎನ್ನುತ್ತೀರಿ, ಹಾಗಾದರೆ ಯಾವ ಭಕ್ತನಿಗೆ ಅದನ್ನು ನೀಡಬೇಕು? ಸಮಿತಿಯನ್ನು ಯಾರು ರಚಿಸುತ್ತಾರೆ? ಸರಕಾರವನ್ನು ಹೊರಗಿಟ್ಟು ನಿರ್ವಹಿಸಲು ಹೊರಟಿರುವ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ಅರ್ಹತಾ ಮಾನದಂಡಗಳನ್ನು ಯಾರು ನಿರ್ಧರಿಸುತ್ತಾರೆ? ಮಧುರೈನಲ್ಲಿ ಜನಿಸಿದ ಮೀನಾಕ್ಷಿ ದೇವಿ ಭಕ್ತ ಚೆನ್ನೈನಲ್ಲಿ ವಾಸಿಸುತ್ತಿದ್ದರೆ ಆತ ಇದಕ್ಕೆ ಅರ್ಹನೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News