ಪ್ರಧಾನಿ ಟೀಕಿಸಿ ಪೋಸ್ಟರ್ ಅಂಟಿಸಿದವರ ಬಂಧನ: 'ನನ್ನನ್ನೂ ಬಂಧಿಸಿ' ಎಂದ ರಾಹುಲ್ ಗಾಂಧಿ

Update: 2021-05-16 10:08 GMT

ಹೊಸದಿಲ್ಲಿ: ಕೋವಿಡ್ ಬಿಕ್ಕಟ್ಟನ್ನು ಕೇಂದ್ರ ಸರಕಾರ ನಿಭಾಯಿಸುತ್ತಿರುವುದನ್ನು ಟೀಕಿಸುವ ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಾಗಿ ದಿಲ್ಲಿಯಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆ ಎಂಬ ವರದಿಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ  ಇತರ ಕಾಂಗ್ರೆಸ್ ಮುಖಂಡರು ಇಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

"ನನ್ನನ್ನೂ ಬಂಧಿಸಿ" ಎಂದು ರಾಹುಲ್ ಗಾಂಧಿ ರವಿವಾರ ಹಲವರ ಬಂಧನಕ್ಕೆ ಕಾರಣವಾಗಿರುವ ಪೋಸ್ಟರ್ ನೊಂದಿಗೆ ಇಂಗ್ಲಿಷ್ ಹಾಗೂ  ಹಿಂದಿ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.  "ಮೋದಿ ಜಿ, ನಮ್ಮ ಮಕ್ಕಳಿಗೆ ಅಗತ್ಯವಿದ್ದ ಲಸಿಕೆಗಳನ್ನು ವಿದೇಶಗಳಿಗೆ ಏಕೆ ಕಳುಹಿಸಿದ್ದೀರಿ?"ಎಂದು ಪೋಸ್ಟರ್ ನಲ್ಲಿ ಪ್ರಶ್ನಿಸಲಾಗಿತ್ತು.

ಪೋಸ್ಟರ್ ಗೆ ಸಂಬಂಧಿಸಿ  ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ದಿಲ್ಲಿ ಪೊಲೀಸರು ಕನಿಷ್ಠ 17 ಜನರನ್ನು ಬಂಧಿಸಿದ್ದಾರೆ. ಬಂಧಿತರು ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ರೀತಿಯನ್ನು  ಟೀಕಿಸಿದ್ದರು.

ಸಾರ್ವಜನಿಕ ಆಸ್ತಿ ವಿರೂಪ ಕಾಯ್ದೆ ಹಾಗೂ  ಸೆಕ್ಷನ್ 188 ರ ಅಡಿಯಲ್ಲಿ ಸುಮಾರು 21 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದಿಲ್ಲಿ  ಪೊಲೀಸರು  ಎಎನ್ ಐಗೆ ತಿಳಿಸಿದ್ದಾರೆ.

ಕೇಂದ್ರ ಸರಕಾರವನ್ನು ಟೀಕಿಸಿದ್ದಕ್ಕೆ ಹಲವರ ಬಂಧನವನ್ನು ರಾಹುಲ್  ಗಾಂಧಿಯವರಲ್ಲದೆ, ಕಾಂಗ್ರೆಸ್ ಹಲವಾರು ಇತರ ನಾಯಕರು  ಟೀಕಿಸಿದ್ದಾರೆ.

ಭಾರತವು ಮುಕ್ತ ದೇಶ. ವಾಕ್ ಸ್ವಾತಂತ್ರ್ಯವಿದೆ.   ಆದರೆ ನೀವು ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಪ್ರಶ್ನೆಯನ್ನು ಕೇಳಬಾರದು. ಅದಕ್ಕಾಗಿಯೇ  ದಿಲ್ಲಿ ಯಲ್ಲಿ ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ದಿಲ್ಲಿ  ಪೊಲೀಸರು 24 ಜನರನ್ನು ಬಂಧಿಸಿದ್ದಾರೆ  ಎಂದು ಕಾಂಗ್ರೆಸ್ ಮುಖಂಡ, ಮಾಜಿ ವಿತ್ತ ಸಚಿವ, ಪಿ.ಚಿದಂಬರಂ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News