ದ.ಕ. ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳು ಕಾರ್ಯಾರಂಭ; ಹೋಂ ಐಸೋಲೇಶನ್‌ನಲ್ಲಿರುವವರ ಮನವೊಲಿಕೆ: ಡಾ. ಕಿಶೋರ್

Update: 2021-05-16 16:26 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 16: ಕೊರೋನ ಸೋಂಕಿತರಾಗಿ ಹೋಂ ಐಸೋಲೇಶನ್‌ನಲ್ಲಿರುವವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿ ಸುವ ಕಾರ್ಯ ದ.ಕ. ಜಿಲ್ಲೆಯಲ್ಲಿ ಆರಂಭಗೊಂಡಿದೆ. ಈಗಾಗಲೆ ಜಿಲ್ಲಾಡಳಿತ ಗುರುತಿಸಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ತುರ್ತು ನಿಗಾ ಅಗತ್ಯವಿರುವ ಕೊರೋನ ಸೋಂಕಿತರನ್ನು ಮನವೊಲಿಸಿ ಸೇರ್ಪಡೆಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಸೋಂಕಿತರಾಗಿ ಹೋಂ ಐಸೋಲೇಶನ್‌ನಲ್ಲಿ ಇರುವ 45 ವರ್ಷ ಮೇಲ್ಪಟ್ಟ, ಡಯಾಬಿಟಿಸ್, ಬಿಪಿ, ಶ್ವಾಸಕೋಶದ ತೊಂದರೆ ಇರುವ ಹಾಗೂ 45 ವರ್ಷ ಕೆಳಗಿನ ರೋಗ ಲಕ್ಷಣ ಇಲ್ಲದೆಯೂ ದೈಹಿಕವಾಗಿ ತೊಂದರೆ ಇರುವಂತಹವರನ್ನು, ಮನೆಯಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲದಿರುವರನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೇರ್ಪಡೆಗೊಳಿಸಲು ಮನವೊಲಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ತಂಡ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.

ಈಗಾಗಲೇ ಆರಂಭಗೊಂಡಿರುವ ಮಂಗಳೂರಿನ ಇಎಸ್‌ಐ ಆಸ್ಪತ್ರೆಯ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ನಲ್ಲಿ 18 ಮಂದಿಯನ್ನು ಭರ್ತಿಗೊಳಿಸಲಾಗಿದೆ. ಸುರತ್ಕಲ್ ಎನ್‌ಐಟಿಕೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 250 ಹಾಸಿಗೆಗಳ ಸೌಲಭ್ಯವಿದೆ. ಅಲ್ಲಿ ಯಾರೂ ಈವರೆಗೂ ದಾಖಲಾಗಿಲ್ಲ. ತಾಲೂಕು ಮಟ್ಟದಲ್ಲಿಯೂ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಗುರುತಿಸ ಲಾಗಿದೆ. ಪುತ್ತೂರಿನ ಬಲ್ನಾಡು ಮೊರಾರ್ಜಿ ದೇಸಾಯಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೆ ಸೋಂಕಿತರನ್ನು ಸೇರ್ಪಡೆಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಕೊರೋನ ಸೋಂಕಿಗೆ ಒಳಗಾಗಿ ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ಕೆಲವರು ಆಸ್ಪತ್ರೆಗೆ ದಾಖಲಾಗುವ ಭಯದಿಂದ ತಮ್ಮ ದೇಹದಲ್ಲಿರುವ ಆರೋಗ್ಯದ ತೊಂದರೆಯನ್ನು ಮುಚ್ಚಿಟ್ಟಿರುತ್ತಾರೆ. ಯಾವುದೇ ಕಾರಣಕ್ಕೂ ಸೋಂಕಿತರಲ್ಲಿ ಅವರಿಗೆ ಅರಿವಿಲ್ಲದೆ ರೋಗ ಉಲ್ಬಣಾವಸ್ಥೆಗೆ ತಲುಪುದನ್ನು ತಪ್ಪಿಸುವ ಸಲುವಾಗಿ ಪ್ರಥಮ ಆದ್ಯತೆಯಲ್ಲಿ ಅವರ ಮನವೊಲಿಸಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಿಸಿಕೊಂಡು ಅವರಿಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಕೋವಿಡ್ ಕೇರ್ ಸೆಂಟರ್‌ಗಳನ್ನು ನಿರ್ವಹಿಸಲು ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದಲ್ಲದೆ, ಆ ಸೆಂಟರ್‌ಗಳಿಗೆ ಸ್ಥಳೀಯ ವೈದ್ಯರಿಂದ ಸಲಹೆ ನೀಡುವುದು, ಜತೆಗೆ ಅಲ್ಲಿಗೆ ಎರಡು ಅಥವಾ ಮೂರು ಪಾಳಿಯಲ್ಲಿ ನರ್ಸ್‌ಗಳನ್ನು ನೇಮಕ ಮಾಡುವ ಕುರಿತಂತೆಯೂ ನಿರ್ಣಯಿಸಲಾಗಿದೆ ಎಂದು ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಸೋಂಕಿತರ ಕಣ್ಗಾವಲಿಗೆ ಹಿಂದಿನ ಕ್ರಮ ಜಾರಿ

ಕೋವಿಡ್ ಪಾಸಿಟಿವ್ ಆಗಿದ್ದರೂ ಯಾವುದೇ ರೋಗ ಗುಣಲಕ್ಷಣಗಳಿಲ್ಲದೆ ಹೋಂ ಐಸೋಲೇಶನ್‌ನಲ್ಲಿರುವರು ಹೊರಗಡೆ ಸುತ್ತಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೊರೋನ ಪ್ರಥಮ ಅಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಪಾಸಿಟಿವ್ ಆಗಿರುವ ಮನೆಗಳಿಗೆ ಪೋಸ್ಟರ್ ಅಂಟಿಸುವುದು, ಮೈಕ್ರೋ ಕಂಟೇನ್ಮೆಂಟ್ ಝೋನ್ ಆಗಿ ಗುರುತಿಸುವುದು, ಅಂತಹ ಮನೆಗಳಿಗೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನು ಖರೀದಿಸಿ ಒದಗಿಸಲು ಸಹಕರಿಸುವುದು ಮೊದಲಾದ ಕಾರ್ಯವನ್ನು ಟಾಸ್ಕ್ ಫೋರ್ಸ್ ಮೂಲಕ ಮಾಡಲು ನಿರ್ಣಯಿಸಲಾಗಿದೆ. ಈಗಾಗಲೇ ತಾಲೂಕು ಹಾಗೂ ನಗರ ವ್ಯಾಪ್ತಿ ಸೇರಿ 10ಕ್ಕೂ ಅಧಿಕ ಕೋವಿಡ್ ಕೇರ್ ಸೆಂಟರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಗ್ರಾ.ಪಂ.ನಲ್ಲೂ ಲಭ್ಯವಿರುವ ಹಾಸ್ಟೆಲ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು. ಸದ್ಯ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಜನರಲ್ ಬೆಡ್‌ಗಳು ಹೊರತುಪಡಿಸಿ 2000ಕ್ಕೂ ಅಧಿಕ ಮಂದಿಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

- ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News