ಚಂಡಮಾರತ: ಮರವಂತೆ ಮೀನುಗಾರರ ಬದುಕು ದುಸ್ಥರ

Update: 2021-05-16 16:36 GMT

ಬೈಂದೂರು, ಮೇ 16: ಚಂಡಮಾರುತದಿಂದಾಗಿ ಸಮುದ್ರ ಪ್ರಕ್ಷುಬ್ಧ ಆಗಿದ್ದು, ಮರವಂತೆಯ 500ಕ್ಕೂ ಅಧಿಕ ಮೀನುಗಾರರು ಕುಟುಂಬಗಳು ಜೀವವನ್ನು ಕೈಯಲ್ಲಿ ಹಿಡಿದು ಬದುಕು ನಡೆಸುವ ಪರಿಸ್ಥಿತಿ ಎದುರಾಗಿದೆ.

ಮರವಂತೆ ಕಡಲಾಕಿನಾರೆಯ ಸಮೀಪದ ಸಂಪರ್ಕ ರಸ್ತೆ ಸಮದ್ರ ಪಾಲಾಗಿದೆ. ಸಾವಿರಾರು ತೆಂಗಿನ ಮರಗಳು, ಮೀನುಗಾರಿಕಾ ದೋಣಿಗಳು ಸಮುದ್ರ ಸೇರಿವೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷದ ಬಗ್ಗೆ ಸ್ಥಳೀಯರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಬಡ ಮೀನುಗಾರರ ಕುಟುಂಬ ರಕ್ಷಣೆಗಾಗಿ ಮನೆ ಗೋಡೆಗೆ ದೋಣಿಗಳನ್ನು ಅಡ್ದಲಾಗಿ ಇಡುತ್ತಿರುವುದು ಕಂಡು ಬಂತು. ಸಮುದ್ರದ ರಾಕ್ಷಸ ಅಲೆ ಕಡಲ ತಡಿಯ ಮನೆಗಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಈ ನಡುವೆ ಮೀನುಗಾರರು ಆತಂಕದ ಬದುಕು ನಡೆಸುತ್ತಿದ್ದಾರೆ.

ನಮ್ಮ ರಕ್ಷಣೆಗೆ ಯಾರು ಇದುವರೆಗೂ ಯಾರೂ ಬಂದಿಲ್ಲ. ಎರಡು ವಾರದ ಹಿಂದೆ ಅಧಿಕಾರಿಗಳು ಭೇಟಿ ನೀಡಿ, ವಿಡಿಯೋ ಮಾಡಿಕೊಂಡು ಹೋಗಿದ್ದರು. ನಮಗೆ ಯಾವುದೇ ಸ್ಪಷ್ಟ ಭರವಸೆಯನ್ನು ನೀಡಿಲ್ಲ. ಸಂಪರ್ಕ ರಸ್ತೆ ನೀರು ಪಾಲಾದ ಮೇಲೆ ಎರಡು ಲೋಡು ಕಲ್ಲು ತಂದು ಹಾಕಿ ದ್ದಾರೆ. ಇದೇ ಕೆಲಸವನ್ನು ಮೂರು ದಿನದ ಹಿಂದೆ ಮಾಡಿದ್ದರೆ, ರಸ್ತೆಯಾದರೂ ಉಳಿಯುತ್ತಿತ್ತು. ಇನ್ನಾದರೂ ಸರಕಾರ ಮತ್ತು ಅಧಿಕಾರಿ ವರ್ಗ ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಿ ಎಂದು ಸ್ಥಳೀಯ ಮೀನುಗಾರ ಮಹಿಳೆ ಒತ್ತಾಯಿಸಿದರು.

ಸಮುದ್ರದ ಅಲೆಯ ರಭಸಕ್ಕೆ ಮನೆಗಳಿಗೆ ಉಪ್ಪುನೀರಿನ ಸತತ ಸಿಂಪಡಣೆ ಆಗುತ್ತಿದ್ದು, ಮನೆಯಲ್ಲಿ ಕೂರಲು ಮಲಗಲೂ ಅಗದ ಸ್ಥಿತಿ ಇದೆ. ಮೀನುಗಾರರ ಕುಟುಂಬ ಕಡಲಕ್ಕೊರೆತ ತಡೆಗೆ ತಾನೆ ಮುಂದಾಗಿದೆ. ಮರಳಿನ ಚೀಲವನ್ನು ಜೋಡಿಸಿಡುವ ಕಾರ್ಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದ್ದಾರೆ. ಸ್ಥಳೀಯ ಮೀನುಗಾರರ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News