ಪ್ಯಾಲೆಸ್ತೀನ್‌ ಪರ ರ‍್ಯಾಲಿ: ಜಮ್ಮು ಕಾಶ್ಮೀರದಲ್ಲಿ 21 ಮಂದಿಯ ಬಂಧನ

Update: 2021-05-16 17:53 GMT
ಸಾಂದರ್ಭಿಕ ಚಿತ್ರ

ಶ್ರೀನಗರ: ಇಸ್ರೇಲ್‌ ಸೈನ್ಯವು ಪ್ಯಾಲೆಸ್ಟೀನ್‌ ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಹಲವಾರು ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದಾರೆ. ಈ ಕುರಿತಾದಂತೆ ಇಸ್ರೇಲ್‌ ಸೈನ್ಯದ ಕ್ರಮವನ್ನು ವಿರೋಧಿಸಿ ಮತ್ತು ಪ್ಯಾಲೆಸ್ತೀನ್‌ ಪರ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ರ್ಯಾಲಿ ಕೈಗೊಂಡಿದ್ದಕ್ಕಾಗಿ ಪೊಲೀಸರು 21 ಮಂದಿಯನ್ನು ಬಂಧಿಸಿದ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ. 

ಅವರು ಕೈಗೊಂಡಿದ್ದ ರ್ಯಾಲಿಯು ಬೀದಿಗಳಲ್ಲಿ ಗಲಭೆ ಹುಟ್ಟು ಹಾಕುವಂತಿದ್ದವು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಮಂದಿಯ ಮೇಲೆ ಶ್ರೀನಗರದಲ್ಲಿ ಹಾಗೂ ಒಬ್ಬನ ವಿರುದ್ಧ ಶೋಪಿಯಾನ್‌ ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್‌ ಸ್ಪೆಕ್ಟರ್‌ ಜನರಲ್‌ ವಿಜಯ್‌ ಕುಮಾರ್‌ THE HINDU ಗೆ ತಿಳಿಸಿದ್ದಾಗಿ ವರದಿಯಾಗಿದೆ.

ಕಾಶ್ಮೀರದ ಶ್ರೀನಗರದಲ್ಲಿನ ಪದ್ಶಾಹಿ ಭಾಗ್‌ ಹಾಗೂ ಸಫಾಕದಲ್‌ ಪ್ರದೇಶಗಳಲ್ಲಿ ಈ ಕುರಿತು ಪ್ರತಿಭಟನೆಗಳು ನಡೆದ ಮರುದಿನ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಇಸ್ರೇಲ್‌ ನ ಧ್ವಜವನ್ನು ಸುಟ್ಟ ಪ್ರತಿಭಟನಕಾರರು ಪ್ಯಾಲೆಸ್ತೀನ್‌ ನೊಂದಿಗಿನ ಒಗ್ಗಟ್ಟನ್ನು ಪ್ರದರ್ಶಿಸಿದ್ದರು ಎಂದು ವರದಿ ತಿಳಿಸಿದೆ. ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿ ಬಂಧಿಸಿದ್ದಾರೆಂದು ಬಂಧಿತರ ಕುಟುಂಬಸ್ಥರು ಆರೋಪಿಸಿದ್ದಾರೆಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News