ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ‘ಕೋರಮಂಡಲ್ ಟಗ್’: ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ನೌಕಾದಳ

Update: 2021-05-17 04:56 GMT
ಅಪಾಯಕ್ಕೆ ಸಿಲುಕಿರುವ ಟಗ್ ಮತ್ತು ಅದರಲ್ಲಿನ ಸಿಬ್ಬಂದಿ

ಕಾಪು, ಮೇ 17: ಕಾಪು ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ‘ಕೋರಮಂಡಲ್ ಎಕ್ಸ್ ಪ್ರೆಸ್ ಟಗ್’ ರಕ್ಷಣೆಗೆ ನೌಕಾ ದಳ ಕಾರ್ಯಾಚರಣೆ ಆರಂಭಿಸಿದೆ.

ಕಾಪು ಲೈಟ್ ಹೌಸ್ ನಿಂದ 5 ಮೈಲ್ ನಾಟೆಕಲ್ ದೂರದಲ್ಲಿ ಬಂಡೆಗೆ ಢಿಕ್ಕಿ ಹೊಡೆದು ನಿಂತಿರುವ ಮಂಗಳೂರಿನ  ಪಣಂಬೂರಿನಲ್ಲಿರುವ ನವ ಮಂಗಳೂರು ಬಂದರಿಗೆ ಹಡಗುಗಳ ಆಗಮನ ಮತ್ತು ನಿರ್ಗಮನಕ್ಕೆ ಸಹಕರಿಸುವ ಈ ಟಗ್‌ನಲ್ಲಿ 9 ಮಂದಿ ಸಿಬ್ಬಂದಿಯಿದ್ದಾರೆ. ಶನಿವಾರ ಅಪಾಯಕ್ಕೆ ಸಿಲುಕಿದ್ದ ಟಗ್ ರಕ್ಷಣೆಗೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿ ಪರಿಣಮಿಸಿತ್ತು. ರವಿವಾರವೂ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸರಕಾರದ ಸೂಚನೆಯಂತೆ ಕೊಚ್ಚಿಯಿಂದ ನೌಕಾದಳದ ಹೆಲಿಕಾಪ್ಟರ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಅಲ್ಲಿಂದ ಕೋಸ್ಟ್ ಗಾರ್ಡ್ ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ನೌಕಾದಳದ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ.

ಚಂಡಮಾರುತದ ಅಲೆಗಳ ಅಬ್ಬರಕ್ಕೆ ಟಗ್‌ನ ಆ್ಯಂಕರ್ ತುಂಡಾಗಿತ್ತಲ್ಲದೆ, ಇಂಜಿನ್ ಗೆ ನೀರು ನುಗ್ಗಿದ್ದರಿಂದ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಶುಕ್ರವಾರ ಪೂರ್ವಾಹ್ನ 11:30ರ ಸುಮಾರಿಗೆ ಸಮುದ್ರದಲ್ಲಿ ತೇಲುತ್ತಿದ್ದ ಟಗ್ ಶನಿವಾರ ಬೆಳಗ್ಗೆ 8:30ರ ಸುಮಾರಿಗೆ ಕಾಪು ಲೈಟ್ ಹೌಸ್ ನಿಂದ ಸುಮಾರು 15 ಕಿ.ಮೀ. ದೂರದಲ್ಲಿ ಬಂಡೆಗೆ ಢಿಕ್ಕಿ ಹೊಡೆದು ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ಅದರಲ್ಲಿದ್ದ 9 ಮಂದಿ ಸಿಬ್ಬಂದಿಯು ಲೈಫ್ ಜಾಕೆಟ್ ಧರಿಸಿ ಸುರಕ್ಷಿತವಾಗಿದ್ದು, ಅವರ ರಕ್ಷಣೆಗೆ ಕೋಸ್ಟ್‌ಗಾರ್ಡ್ ಕಾರ್ಯಾಚರಣೆಗೆ ಮುಂದಾಗಿದ್ದರೂ ಪ್ರತಿಕೂಲ ಹವಾಮಾನದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಕ್ಷಣಾ ಕಾರ್ಯಾಚರಣೆಗೆ ನೌಕಾ ಸೇನಾ ಹೆಲಿಕಾಪ್ಟರ್ ಬಳಸಲು ಅನುಮತಿ ನೀಡಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ರವಿವಾರ ತಿಳಿಸಿದ್ದರು. ಅದರಂತೆ ಇಂದು ಬೆಳಗ್ಗೆ ಕೊಚ್ಚಿಯಿಂದ ನೌಕಾದಳದ ಹೆಲಿಕಾಪ್ಟರ್ ಆಗಮಿಸಿದ್ದು, ಕಾರ್ಯಾಚರಣೆ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News