ಕಾಪು: ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ‘ಕೋರಮಂಡಲ್ ಟಗ್’ ನಲ್ಲಿದ್ದ 9 ಸಿಬ್ಬಂದಿಯ ರಕ್ಷಣೆ

Update: 2021-05-17 05:54 GMT

ಕಾಪು, ಮೇ 17: ಕಾಪು ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ‘ಕೋರಮಂಡಲ್ ಎಕ್ಸ್ ಪ್ರೆಸ್ ಟಗ್’ ನಲ್ಲಿದ್ದ ಒಂಭತ್ತು ಮಂದಿ ಸಿಬ್ಬಂದಿಯನ್ನು ನೌಕಾದಳ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

''ಅರಬ್ಬೀ ಸಮುದ್ರದಲ್ಲಿ ಟಗ್ ನಲ್ಲಿ ಸಿಲುಕಿದ್ದ 9 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್ ಹಾಗೂ ನೌಕಾಪಡೆಗೆ ಧನ್ಯವಾದಗಳು. ಇಂದು ಮುಂಜಾನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಲಾಗಿದೆ. ಕಾರ್ಮಿಕರ ಆರೋಗ್ಯದ ತಪಾಸಣೆ ಸೇರಿದಂತೆ ಎಲ್ಲ ಅಗತ್ಯ ನೆರವು ಒದಗಿಸಲಾಗುತ್ತಿದೆ'' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಕಾಪು ಲೈಟ್ ಹೌಸ್ ನಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರದ ಮಧ್ಯೆ ಬಂಡೆಗಳ ನಡುವೆ ಸಿಲುಕಿಕೊಂಡಿರುವ ಮಂಗಳೂರಿನ ಎಂ.ಆರ್.ಪಿ.ಎಲ್  ಕಂಪನಿಗೆ ಆಗಮಿಸುವ ಕಚ್ಛಾ ತೈಲ ಅಂಡರ್ ಗ್ರೌಂಡ್ ಪೈಪ್ ಕನೆಕ್ಟ್ ಮಾಡುವ ಗುತ್ತಿಗೆ ಪಡೆದಿರುವ ಕೆಇಐ ಆರ್.ಎಸ್.ಒ.ಆರ್.  ಕಂಪನಿಯ ಕೋರಮಂಡಲ ಸಪೋರ್ಟರ್-9 ಎಂಬ ಹೆಸರಿನ ನೌಕೆಯಲ್ಲಿರುವ 9 ಮಂದಿ ಸಿಬ್ಬಂದಿಯನ್ನು ಸೋಮವಾರ ಬೆಳಗ್ಗೆ ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ನೌಕಾದಳದ ಜಂಟಿ ಕಾರ್ಯಾಚರಣೆಯ ಮೂಲಕ ರಕ್ಷಿಸಿದೆ.

ರಕ್ಷಣಾ ಕಾರ್ಯಾಚರಣೆಗೆ ಸ್ಪೀಡ್ ಬೋಟ್, ವರಾಹ ನೌಕೆ, ಹೆಲಿಕಾಪ್ಟರ್ ಬಳಸಲಾಗಿತ್ತು. ಇಬ್ಬರನ್ನು ಹೆಲಿಕಾಪ್ಟರ್ ಹಾಗೂ ಏಳು ಮಂದಿಯನ್ನು ಸ್ಪೀಡ್ ಬೋಟ್ ಮೂಲಕ‌ ರಕ್ಷಣೆ ಮಾಡಲಾಗಿದ್ದು, ಅವರನ್ನು ಕೋಸ್ಟ್ ಗಾರ್ಡ್ ಶಿಪ್ ವರಾಹ ಮೂಲಕ ಕೋಸ್ಟ್ ಗಾರ್ಡ್ ನವರು ಎನ್.ಎಂ.ಪಿ.ಟಿ ಬಂದರಿಗೆ ಕರೆತರುತ್ತಿದ್ದಾರೆ. ಎನ್.ಎಂ.ಪಿ.ಟಿ.ಯಲ್ಲಿ ಕಾರ್ಮಿಕರ ಆರೋಗ್ಯದ ತಪಾಸಣೆಗೆ ವೈದ್ಯರ ತಂಡ ಸಜ್ಜಾಗಿ ನಿಂತಿದೆ.

ಕಾಪು ಲೈಟ್ ಹೌಸ್ ನಿಂದ 5 ಮೈಲ್ ನಾಟೆಕಲ್ ದೂರದಲ್ಲಿ ಬಂಡೆಗೆ ಢಿಕ್ಕಿ ಹೊಡೆದು ನಿಂತಿರುವ ಈ ಟಗ್‌ನಲ್ಲಿ 9 ಮಂದಿ ಸಿಬ್ಬಂದಿಯಿದ್ದರು. ಶನಿವಾರ ಅಪಾಯಕ್ಕೆ ಸಿಲುಕಿದ್ದ ಟಗ್ ರಕ್ಷಣೆಗೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿ ಪರಿಣಮಿಸಿತ್ತು. ರವಿವಾರವೂ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕೊಚ್ಚಿಯಿಂದ ನೌಕಾದಳದ ಹೆಲಿಕಾಪ್ಟರ್ ಆಗಮಿಸಿ 9 ಕಾರ್ಮಿಕರನ್ನು ರಕ್ಷಿಸಿದೆ.

ಟಗ್‌ನಲ್ಲಿ ಮುಲ್ಲಾ ಖಾನ್ (ಕ್ಯಾಪ್ಟನ್), ಗೌರವ್ ಕುಮಾರ್ (ಸೆಕೆಂಡ್ ಕ್ಯಾಪ್ಟನ್), ಶಾಂತನು ಎ.ವಿ., ರಾಹುಲ್, ದೀಪಕ್, ಪ್ರಶಾಂತ್, ತುಷಾರ್, ಲಕ್ಷ್ಮೀ ನಾರಾಯಣ್, ರೂಡ್ ಅಹ್ಮದ್ ಎಂಬವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News