ಕಾಂಗ್ರೆಸ್ ಸರಕಾರ ಇದ್ದಿದ್ದರೆ ಬೆಲೆ ಏರಿಕೆಯಾಗುತ್ತಿರಲಿಲ್ಲ: ರಮಾನಾಥ ರೈ

Update: 2021-05-17 11:22 GMT

ಮಂಗಳೂರು, ಮೇ 17: ಕೊರೋನದಂತಹ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇರುತ್ತಿದ್ದಲ್ಲಿ ಪೆಟ್ರೋಲ್, ಡೀಸೆಲ್ ಸಹಿತ ಎಲ್ಲ ಆವಶ್ಯ ಸಾಮಗ್ರಿಗಳ ಬೆಲೆ ಕಡಿಮೆ ಆಗಿರುತ್ತಿತ್ತು. ಅಗತ್ಯವಿದ್ದರೆ ಕೊರೋನ ಸಂದರ್ಭದಲ್ಲಿ ಪಡಿತರ ವಿತರಿಸಲಾಗುತ್ತಿತ್ತು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದರೆ ವೈದ್ಯಕೀಯ ಸೌಲಭ್ಯಗಳ ನಿರ್ವಹಣೆ ಇನ್ನೂ ಉತ್ತಮವಾಗಿರುತ್ತಿತ್ತು ಎಂದರು.

ಕೊರೋನ ಸೋಂಕಿನಿಂದಾಗಿ ಜನರು ಎಲ್ಲ ರೀತಿಯಿಂದಲೂ ಸಂಕಷ್ಟ ಎದುರಿಸುತ್ತಿದ್ದರೂ ಸರಕಾರ ನಡೆಸುತ್ತಿರುವ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕುಸಿಯುತ್ತಿರುವ ವರ್ಚಿಸ್ಸಿನದ್ದೇ ಚಿಂತೆ.  ಜನರ ಸಂಕಷ್ಟಕ್ಕೆ ನೆರವಾಗುವುದಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕೊರೋನ ಸೋಂಕಿತರಿಗೆ ಸೂಕ್ತವಾದ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ಸೂಚಿತ ವಯೋಮಾನದವರಿಗೆ ಸಾಕಷ್ಟು ಕೋವಿಡ್ ನಿರೋಧಕ ಲಸಿಕೆ ನೀಡುತ್ತಿಲ್ಲ. ಕೊರೋನ ನಿಯಂತ್ರಣಕ್ಕಾಗಿ ಹೇರಲಾದ ಲೌಕ್ ಡೌನ್‌ನಿಂದಾಗಿ ಬಡ, ಕಾರ್ಮಿಕ ಮತ್ತು ಮಧ್ಯಮ ವರ್ಗದ ಜನರಿಗೆ ಜೀವನೋಪಾಯದ ಸಮಸ್ಯೆಯಾಗಿದೆ ಎಂದರು.

ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ಸಿನವರು ಬಿಟ್ಟು ಹೋಗಿರುವುದರ ಕಾರಣ ಎಂದು ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಸರಕಾರಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಗುತ್ತಿಗೆದಾರ ಓಡಿ ಹೋದಾಗ ರಾಜ್ಯ ಸರಕಾರ ಮತ್ತು ಎಂಆರ್ ಪಿಎಲ್ ಅನುದಾನದೊಂದಿಗೆ ಕಟ್ಟಡ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಸರಕಾರ. ಮಾತ್ರವಲ್ಲದೆ, ವೆನ್‌ಲಾಕ್ ಆಸ್ಪತ್ರೆಯ ಹೊಸ ಬ್ಲಾಕುಗಳು ಸೇರಿದಂತೆ ಜಿಲ್ಲೆಯಲ್ಲಿ ಹಲವು ಸರಕಾರಿ ಆಸ್ಪತ್ರೆಗಳಿಗೆ ಕಟ್ಟಡ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಸರಕಾರ ಎಂಬುದನ್ನು ಸಂಸದರ ಗಮನಕ್ಕೆ ತರಲು ಬಯಸುವುದಾಗಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕೊರೋನ ಲಾಕ್ ಡೌನ್‌ನಿಂದಾಗಿ ಜನರಿಗೆ ಸಂಕಷ್ಟ ಆಗಿದ್ದು, ಸರಕಾರ ಸೂಕ್ತ ಪ್ಯಾಕೇಜ್ ವಿತರಣೆ ಮಾಡಬೇಕೆಂದು ಎಂದು ಒತ್ತಾಯಿಸಿದರು.

ಮಲೆನಾಡು ಮತ್ತು ಕರಾವಳಿಯ ಗ್ರಾಮೀಣ ಪ್ರದೇಶದ ಜನತೆ ವಾಹನ ನಿಷೇಧ ನಿಯಮಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಗುಡ್ಡಗಾಡು ಪ್ರದೇಶದ ಜನರಿಗೆ ಸರಕಾರವೇ ಜೀವನಾವಶ್ಯ ಸಾಮಗ್ರಿಗಳನ್ನು ವಿತರಿಸಬೇಕು.ಕೊರೋನ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ದಾದಿಯರಿಗೆ ಮಾಸಿಕ ವೇತನ ಪಾವತಿ ಮಾಡಬೇಕು ಎಂದವರು ಆಗ್ರಹಿಸಿದರು.

ಜಿಲ್ಲೆಯಲ್ಲಿ ವಾಹನ ಜಪ್ತಿ ವಿಚಾರದಲ್ಲಿ ಕಾನೂನು ಕಟ್ಟಲೆಗಳ ಬಗ್ಗೆ ಜನಜಾಗೃತಿ ಮೂಡಿಸದೆ ಮಾಡುವುದು ಸರಿಯಲ್ಲ. ಈ ರೀತಿ ಜಪ್ತಿ ಮಾಡಲಾದ ವಾಹನಗಳನ್ನು ಪೊಲೀಸ್ ಠಾಣೆಯಲ್ಲೇ ಬಿಡುಗಡೆ ಮಾಡಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನರು ಇಂದು ಭೀತಿಯಿಂದ ಲಸಿಕೆ ಹಾಕಿಕೊಳ್ಳು ಮುಂದಾಗಿದ್ದಾರೆ, ಹೀಗಾಗಬಾರದಿತ್ತು. ಜನರಲ್ಲಿ ಆತ್ಮ ವಿಶ್ವಾಸ ಮತ್ತು ಧೈರ್ಯ ಮೂಡಿಸಿ ಲಸಿಕೆ ಅಭಿಯಾನ ಮಾಡಬೇಕಿತ್ತು ಮೊದಲು ಡಿ ಗ್ರೂಪ್ ಸಿಬ್ಬಂದಿಗೆ ಕೊಡುವ ಬದಲು ಸಚಿವರು, ಶಾಸಕರ ಸಹಿತ ವೈದ್ಯಕೀಯ ಕ್ಷೇತ್ರದ ವಿಐಪಿಗಳಿಗೆ ಲಸಿಕೆ ನೀಡುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ನಾವು ಅಂದೇ ಹೇಳಿದ್ದೆ. ಈಗ ಜನರು ಲಸಿಕೆ ಪಡೆಯಲು ಮುಂದೆ ಬಂದಾಗ ಲಸಿಕೆಯನ್ನು ಪೂರೈಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಮಾಜಿ ಆರೋಗ್ಯ ಸಚಿವ, ಶಾಸಕ ಯು.ಖಾದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ,  ಮಾಜಿ ಶಾಸಕರಾದ ಜೆ.ಲೋಬೊ ಮತ್ತು ಮೊಯ್ದಿನ್ ಬಾವ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನ್ ಜಿಲ್ಲಾ ಅಧ್ಯಕ್ಷ ಶುಬೋದಯ ಆಳ್ವ, ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News