ಟಗ್ ದುರಂತ; ದ.ಕ.ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆ: ಕಂದಾಯ ಸಚಿವ ಅಶೋಕ್

Update: 2021-05-17 13:27 GMT

ಮಂಗಳೂರು, ಮೇ 17: ಅರಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಹಾವಳಿಯಿಂದಾಗಿ ನಡೆದ ‘ಟಗ್’ ದುರಂತಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾಧಿಕಾರಿ ನೇತೃತ್ವದ ವಿಶೇಷ ತಂಡಕ್ಕೆ ಸಮಗ್ರ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಕರಾವಳಿ ತೀರದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ, ಮಳೆ ಮತ್ತು ಕಡಲ್ಕೊರೆತದಿಂದ ಹಾನಿಗೀಡಾದ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲನೆ ಹಾಗೂ ಟಗ್ ದುರಂತದ ಬಗ್ಗೆ ಮಾಹಿತಿ ಪಡೆದ ಬಳಿಕ ಎನ್‌ಎಂಪಿಟಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ದುರಂತದ ಬಗ್ಗೆ ಈಗಾಗಲೆ ದ.ಕ.ಜಿಲ್ಲಾಧಿಕಾರಿ, ಎಂಆರ್‌ಪಿಎಲ್, ಎನ್‌ಎಂಪಿಟಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಪ್ರಕರಣದ ಬಗ್ಗೆ ಕಂಪೆನಿಯು ಆರೋಪ-ಪ್ರತ್ಯಾರೋಪ ಮಾಡುತ್ತಿದೆ. ಹಾಗಾಗಿ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಡಿಸಿ ನೇತೃತ್ವದ ತನಿಖಾ ವರದಿಯ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರ್.ಅಶೋಕ್ ಹೇಳಿದರು.

'ತಲಾ 10 ಲಕ್ಷ ರೂ. ಪರಿಹಾರ'

ಟಗ್ ದುರಂತಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲು ಎಂಆರ್‌ಪಿಎಲ್ ಕಂಪೆನಿಗೆ ಸೂಚನೆ ನೀಡಲಾಗಿದೆ. ಕಂಪೆನಿಯ ಅಧಿಕಾರಿಗಳು ಕೂಡ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಸಚಿವ ಅಶೋಕ್ ತಿಳಿಸಿದರು.

ತೌಕ್ತೆ ಚಂಡಮಾರುತದಿಂದಾಗಿ ರಾಜ್ಯದ 22 ತಾಲೂಕಿನ 121 ಗ್ರಾಮಗಳಲ್ಲಿ ಸುಮಾರು 330 ಮನೆಗಳಿಗೆ ಹಾನಿಯಾಗಿದೆ. 6 ಮಂದಿ ಮೃತಪಟ್ಟಿದ್ದಾರೆ. ಕೃಷಿ-ತೋಟದ 2.87 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿದೆ. 104 ಬೋಟ್‌ಗಳಿಗೂ ಹಾನಿಯಾಗಿದೆ. 290 ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮಳೆಯಿಂದ ರಸ್ತೆ, ಬೆಳೆ, ಮೆಸ್ಕಾಂ ಸಹಿತ ಎಲ್ಲಾ ರೀತಿಯ ಹಾನಿಯ ನಷ್ಟದ ಅಂದಾಜು ಬಗ್ಗೆ ವರದಿ ಸಲ್ಲಿಸಲು ಆಯಾ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ಹೇಳಿದರು.

ಮಂಗಳೂರು ತಾಲೂಕಿನಲ್ಲಿ 6 ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, 168 ಮಂದಿ ಆಶ್ರಯ ಪಡೆಯುತ್ತಿದ್ದಾರೆ. 182 ಕುಟುಂಬಗಳಿಗೆ ತಲಾ 10 ಸಾವಿರ ರೂ. ತುರ್ತು ಪರಿಹಾರ ನೀಡಲು ತಿಳಿಸಲಾಗಿದೆ. 63 ಭಾಗಶಃ ಮತ್ತು 24 ಪೂರ್ತಿ ಮನೆ ಹಾನಿಯಾಗಿದೆ. ಭಾಗಶಃ ಮನೆ ಹಾನಿಯಾದವರಿಗೆ ತಲಾ 1ಲಕ್ಷ ರೂ. ಮತ್ತು ಪೂರ್ತಿ ಮನೆ ಹಾನಿಯಾದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News