ರೋಗ ಲಕ್ಷಣಗಳಿರುವ ಸೋಂಕಿತರನ್ನು ಕೇರ್‌ಸೆಂಟರ್ ಗೆ ದಾಖಲಿಸಿ: ಶಾಸಕ ರಘುಪತಿ ಭಟ್

Update: 2021-05-17 13:36 GMT

ಉಡುಪಿ, ಮೇ 17: ಸುರಕ್ಷತೆಯ ದೃಷ್ಟಿಯಿಂದ ರೋಗ ಲಕ್ಷಣ ಇರುವ ಕೊರೋನಾ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕು ಹಾಗೂ ಆಕ್ಸಿಜನ್ ಸ್ಯಾಚುಲೇಶನ್ ಲೆವೆಲ್ 94ಕ್ಕಿಂತ ಕಡಿಮೆ ಬಂದವರನ್ನು ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿ ನಗರದ 6 ವಾರ್ಡ್‌ಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶಾರದಾ ಕಲ್ಯಾಣ ಮಂಟಪದಲ್ಲಿ ಸೋಮ ವಾರ ನಡೆದ ಕೋವಿಡ್-19 ನಿಯಂತ್ರಣ ಸಂಬಂಧ ರಚಿಸಲಾದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಉಡುಪಿಯ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೆಡ್ ಮತ್ತು ಆಕ್ಸಿಜನ್ ಬೆಡ್‌ಗಳ ಕೊರತೆಯಿರುವುದಿಲ್ಲ. ಯಾವುದೇ ಅಪಪ್ರಚಾರ ಗಳಿಗೆ ಜನತೆ ಕಿವಿಗೊಡದಂತೆ ಜನರಿಗೆ ಮನವರಿಕೆ ಮಾಡಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಕೋವಿಡ್- 19 ಸೋಂಕು ದೃಡಪಟ್ಟವರು ರೋಗ ಲಕ್ಷಣಗಳಿದ್ದು, ಆಸ್ಪತ್ರೆಗೆ ದಾಖಲಾಗಬೇಕಾದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಇಲ್ಲವಾದರೆ ಕಾಲ್ ಸೆಂಟರ್ ಮುಖಾಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು. ಕೋವಿಡ್ ಸೋಂಕಿತರ ಚಿಕಿತ್ಸೆ ಆಯುಷ್ಮಾನ್ ಯೋಜನೆ ಯಡಿ ಸಂಪೂರ್ಣವಾಗಿ ಉಚಿತ ವಾಗಿರುತ್ತದೆ. ಅಲ್ಲದೆ ಐಸೋಲೇಷನ್ ಆಗಲು ಆರಂಭಿಸಲಾದ ಕೋವಿಡ್ ಕೇರ್ ಸೆಂಟರ್ ಸಂಪೂರ್ಣ ಉಚಿತ ವಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ವಹಿಸಲು 24 ಗಂಟೆಯೂ ವೈದ್ಯಕೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿ ದ್ದಾರೆ ಎಂದು ಅವರು ತಿಳಿಸಿದರು.

ತಂಡ ಹೋಮ್ ಐಸೋಲೇಷನ್‌ನಲ್ಲಿರುವವರ ಮನೆಗೆ ಪ್ರತಿನಿತ್ಯ ಭೇಟಿ ನೀಡಿ ಅವರ ಆಕ್ಸಿಜನ್ ಸ್ಯಾಚುಲೇಶನ್ ಲೆವೆಲ್ ಪರೀಕ್ಷೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಸೋಂಕಿತರ ಆಕ್ಸಿಜನ್ ಸ್ಯಾಚುಲೇಶನ್ ಲೆವೆಲ್ ಪ್ರತಿದಿನ ಪರೀಕ್ಷೆ ಮಾಡಬೇಕು. ಶಾಸಕರ ಪ್ರದೇಶಾಭಿವೃದ್ಧಿ ನಿಧಿ 10 ಲಕ್ಷ ರೂ. ಅನುದಾನದಲ್ಲಿ ಫಲ್ಸ್ ಆಕ್ಷೀ ಮೀಟರ್ ಖರೀದಿ ಮಾಡಲಾಗಿದೆ. ಇದನ್ನು ಐಸೋಲೇಶನ್ ನಲ್ಲಿರುವ ಸೋಂಕಿತರ ಮನೆಗೆ ಮತ್ತೆ ವಾಪಸ್ ಪಡೆಯುವ ಷರತ್ತು ವಿಧಿಸಿ ನೀಡಬೇಕು ಎಂದು ಅವರು ಸೂಚಿಸಿದರು.

ಉಡುಪಿ ಡಿವೈಎಸ್ಪಿ ಸುಧಾಕರ್ ಎಸ್.ನಾಯಕ್, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ನಗರಸಭೆ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News