ಸಾಂಕ್ರಾಮಿಕ ರೋಗಗಳಿಂದ ಸುರಕ್ಷಿತರಾಗಲು ಮುಂಜಾಗೃತಾ ಕ್ರಮ: ಉಡುಪಿ ಜಿಲ್ಲಾಧಿಕಾರಿ

Update: 2021-05-17 14:53 GMT

ಉಡುಪಿ, ಮೇ 17: ಜಿಲ್ಲೆಯಲ್ಲಿ ಈಗಾಗಲೇ ಭಾಗಶಃ ಮಳೆಗಾಲ ಚುರುಕು ಗೊಂಡಿರುವುದರಿಂದ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್, ಚಿಕುನ್‌ಗುನ್ಯಾ ಮತ್ತು ಮೆದುಳು ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡು ಬರಲಾರಂಭಿಸಲಿದೆ. ಹವಾಮಾನ ಬದಲಾವಣೆಯಿಂದ ಡೆಂಗ್, ಮಲೇರಿಯಾ ಹರಡುತ್ತಿದ್ದು, ಜನರು ಜಾಗೃತರಾಗಿ ಎಲ್ಲಾ ಸಾಂಕ್ರಾಮಿಕ ರೋಗಗಳಿಂದ ಸುರಕ್ಷಿತರಾಗಿರಲು ಬೇಕಾದಂತಹ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ವಿಶೇಷ ಒತ್ತು ನೀಡಲಾಗಿದ್ದು, ಸಾಂಕ್ರಾಮಿಕ ರೋಗ ಪತ್ತೆ, ಸಂಪೂರ್ಣ ಚಿಕಿತ್ಸೆ ಹಾಗೂ ನಿಯಂತ್ರಣ ಕ್ರಮಗಳ ಅನುಷ್ಠಾನದ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮಹತ್ತರವಾದ ಹೆಜ್ಜೆ ಇಡುತ್ತಿದೆ. ಡೆಂಗ್ ತಡೆಯುವ ನಿಟ್ಟಿನಲ್ಲಿ ಲಾರ್ವಾ ಉತ್ಪತ್ತಿ ತಾಣಗಳ ನಾಶ ಹಾಗೂ ಮಲೇರಿಯಾ ನಿಯಂತ್ರಣದಲ್ಲಿ ಸಕ್ರೀಯ ರಕ್ತಲೇಪನ ಸಂಗ್ರಹ ಅಭಿಯಾನ, ದೃಢಪಟ್ಟ ಪ್ರಕರಣಕ್ಕೆ ಸ್ಥಳದಲ್ಲಿಯೇ ಶೀಘ್ರ ಚಿಕಿತ್ಸೆ ನಡೆಸಲಾಗುತ್ತಿದೆ.

ಆರೋಗ್ಯ ಇಲಾಖೆಯಿಂದ ಸೊಳ್ಳೆ ಉತ್ಪತ್ತಿ ತಾಣಗಳ ಪತ್ತೆ ಹಾಗೂ ಲಾರ್ವಾಗಳ ನಾಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಚಟುವಟಿಕೆ ಜಾರಿ ಯಲ್ಲಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಕಾರ್ಯಕ್ರಮಗಳನ್ನು ನಡೆಸಲು ಸೂಚಿಸಲಾಗಿದೆ. 15 ದಿನಕ್ಕೊಮ್ಮೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಆಶಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯ ನಡೆಯುತ್ತಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕೀಟಜನ್ಯ ರೋಗಗಳ ಶೀಘ್ರ ಪತ್ತೆಗೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಅನುಕೂಲವಾಗು ವಂತೆ ವಿಶೇಷ ನಿಯಂತ್ರಣ ತಂಡಗಳನ್ನು ರಚಿಸಿ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ನಿಯಂತ್ರಣಾ ಕ್ರಮವಾಗಿ ಜ್ವರ ಸಮೀಕ್ಷಾ ಕಾರ್ಯ, ಸೊಳ್ಳೆ ಉತ್ಪತ್ತಿ ತಾಣಗಳ ನಾಶ, ಹೊರಾಂಗಣ/ಒಳಾಂಗಣ ಧೂಮೀಕರಣವನ್ನು ವ್ಯವಸ್ಥಿತವಾಗಿ ಸಮಸ್ಯಾತ್ಮಕ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ.

ಮಲ್ಪೆ ಬಂದರು ಪ್ರದೇಶ ಹಾಗೂ ನಗರಸಭಾ ವ್ಯಾಪ್ತಿಯ ಪ್ರದೇಶಗಳ ಸುತ್ತಮುತ್ತ ಹೆಚ್ಚಿನ ಮಲೇರಿಯಾ/ಡೆಂಗ್ ಪ್ರಕರಣಗಳ ವರದಿಯ ಹಿನ್ನಲೆಯಲ್ಲಿ ಈ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಆರೋಗ್ಯ ಇಲಾಖೆ, ನಗರಸಭೆ ಹಾಗೂ ಮೀನುಗಾರಿಕಾ ಇಲಾಖೆಗಳ ಸಮನ್ವಯದೊಂದಿಗೆ ಸೊಳ್ಳೆಗಳ ನಿಯಂತ್ರಣ, ತ್ವರಿತ ರೋಗ ಪತ್ತೆ ಹಾಗೂ ಚಿಕಿತ್ಸೆ, ನಿಂತ ನೀರಿನ ಸೂಕ್ತ ವಿಲೇವಾರಿ ಇತ್ಯಾದಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಮಲೇರಿಯಾ ಪ್ರಕರಣಗಳ ಮೇಲೆ ಹಿಡಿತ ಸಾಧಿಸುವತ್ತ ಗಮನಹರಿ ಸಲಾಗುತ್ತಿದೆ.

ಜಿಲ್ಲೆಯಲ್ಲಿ ಸದ್ಯ ಕೋವಿಡ್- 19 ಸಂಬಂಧ ಲಾಕ್‌ಡೌನ್ ಇದ್ದು, ಮನೆಗಳಲ್ಲಿ ನೀರನ್ನು ಜಾಸ್ತಿ ಸಂಗ್ರಹಿಸುತ್ತಿರುವುದರಿಂದ ಹಾಗೂ ಜಿಲ್ಲೆಯಾದ್ಯಂತ ಆಗಾಗ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳು ಜಾಸ್ತಿಯಾಗಿ ಮಲೇರಿಯಾ/ಡೆಂಗ್ ಪ್ರಕರಣಗಳು ಕಂಡುಬರ ಲಾರಂಭಿಸಿವೆ. ಆದುದರಿಂದ ಸಾರ್ವಜನಿಕರು ಮನೆಯ ಸುತ್ತಮುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್‌ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಪುನ: ತುಂಬಿಸಿ ಭದ್ರವಾಗಿ ಮುಚ್ಚಿಡಬೇಕು. ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟೈರ್, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು ಅಥವಾ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸೊಳ್ಳೆಗಳ ಕಚ್ಚುವಿಕೆಯಿಂದ ಮಲೇರಿಯಾ/ಡೆಂಗ್ ರೋಗಗಳು ಹರಡುವು ದರಿಂದ ರೋಗದಿಂದ ದೂರವಿರಲು ಮಲಗುವಾಗ ಹಾಗೂ ವಿಶ್ರಾಂತಿ ಪಡೆಯುವಾಗ ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ಬಳಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News