ಉಡುಪಿ : ಕೋವಿಡ್‌ಗೆ ಮತ್ತೆ 5 ಬಲಿ; 897 ಮಂದಿಗೆ ಕೊರೋನ ಪಾಸಿಟಿವ್

Update: 2021-05-17 15:06 GMT

ಉಡುಪಿ, ಮೇ 17: ಕೊರೋನ ಸೋಂಕಿಗೆ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಐವರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನ ಸಾಂಕ್ರಾಮಿಕಕ್ಕೆ ಮೃತಪಟ್ಟವರ ಸಂಖ್ಯೆ 271ಕ್ಕೇರಿದೆ. ದಿನದಲ್ಲಿ 897 ಮಂದಿ ಹೊಸದಾಗಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಜಿಲ್ಲೆಯಲ್ಲಿ ಇಂದು 837 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಇನ್ನೂ 6860 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಸೋಮವಾರ ಜಿಲ್ಲೆಯಲ್ಲಿ ಮೃತಪಟ್ಟ ಐವರಲ್ಲಿ ನಾಲ್ವರು (58, 65, 80, 54 ವರ್ಷ) ಪುರುಷರು ಹಾಗೂ 62 ವರ್ಷದ ಓರ್ವ ಮಹಿಳೆ ಸೇರಿ ದ್ದಾರೆ. ಮೃತರಲ್ಲಿ ಮೂವರು ಕುಂದಾಪುರ ತಾಲೂಕು ಹಾಗೂ ಇಬ್ಬರು ಉಡುಪಿ ತಾಲೂಕಿನವರು. ಇಬ್ಬರು ಕುಂದಾಪುರ ಸರಕಾರಿ, ಇಬ್ಬರು ಉಡುಪಿ ಖಾಸಗಿ ಹಾಗೂ ಒಬ್ಬರು ಮಣಿಪಾಲ ಆಸ್ಪತ್ರೆಗಳಲ್ಲಿ ನಿನ್ನೆ ಮತ್ತು ಇಂದು ಮೃತಪಟ್ಟರು.

ಕೋವಿಡ್ ಸೋಂಕಿನ ಗುಣಲಕ್ಷಣದೊಂದಿಗೆ ರೋಗದ ಉಲ್ಬಣಾವಸ್ಥೆಯಲ್ಲಿ ಆಸ್ಪತ್ರೆಗೆ ಧಾವಿಸುವ ಪ್ರಕರಣ ಹೆಚ್ಚುತಿದ್ದು, ಒಬ್ಬರು ದಾಖಲಾದ ದಿನವೇ, ಇಬ್ಬರು ಮರುದಿನ ಮೃತಪಟ್ಟರೆ, ಒಬ್ಬರು ಮೂರನೇ ದಿನ, ಇನ್ನೊಬ್ಬರು ಏದನೇ ದಿನ ಮೃತಪಟ್ಟಿದ್ದಾರೆ. ಎಲ್ಲರೂ ಉಸಿರಾಟದ ತೊಂದರೆಯೊಂದಿಗೆ ನ್ಯುಮೋನಿಯಾದಿಂದ ಬಳಲುತಿದ್ದರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಪಾಸಿಟಿವ್ ಬಂದ 897 ಮಂದಿಯಲ್ಲಿ 444 ಮಂದಿ ಪುರುಷರು ಹಾಗೂ 453 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 388, ಕುಂದಾಪುರ ತಾಲೂಕಿನ 271 ಹಾಗೂ ಕಾರ್ಕಳ ತಾಲೂಕಿನ 231 ಮಂದಿ ಇದ್ದು, ಉಳಿದ 7 ಮಂದಿ ಹೊರಜಿಲ್ಲೆಗಳಿಂದ ಜಿಲ್ಲೆಗೆ ವಿವಿಧ ಕಾರಣಗಳಿಗಾಗಿ ಆಗಮಿಸಿದವರು.

ರವಿವಾರ 837 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 40,505ಕ್ಕೇರಿದೆ. ನಿನ್ನೆ ಜಿಲ್ಲೆಯ 1520 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 897 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 47,636 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,49,327 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಕಪ್ಪು ಶಿಲೀಂದ್ರದ ಪ್ರಕರಣವಿಲ್ಲ

ಜಿಲ್ಲೆಯ ಯಾವುದೇ ಆಸ್ಪತ್ರೆಗಳಿಂದ ಕಪ್ಫು ಶಿಲೀಂದ್ರ ಸೋಂಕಿನ ಪ್ರಕರಣ ವರದಿಯಾಗಿಲ್ಲ ಎಂದು ಡಿಎಚ್‌ಓ ಡಾ.ಸೂಡ ಸ್ಪಷ್ಟಪಡಿಸಿದ್ದಾರೆ.

3217 ಮಂದಿಗೆ ಕೋವಿಡ್ ಲಸಿಕೆ

ಜಿಲ್ಲೆಯಲ್ಲಿ ಸೋಮವಾರ ಒಟ್ಟು 3217 ಮಂದಿ ಕೋವಿಡ್‌ಗಿರುವ ಲಸಿಕೆ ಯನ್ನು ಪಡೆದಿದ್ದಾರೆ. ಇವರಲ್ಲಿ 2370 ಮಂದಿ ಮೊದಲ ಹಾಗೂ 847 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ಹೇಳಿದ್ದಾರೆ.

45 ವರ್ಷ ಮೇಲಿನ 2126 ಮಂದಿ ಮೊದಲ ಹಾಗೂ 795 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದರೆ, 72 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 224 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಲಸಿಕೆಯನ್ನು ಪಡೆದಿದ್ದಾರೆ.

ಈ ಮೂಲಕ ಜಿಲ್ಲೆಯ ಒಟ್ಟು 1,99,506 ಮಂದಿ ಮೊದಲ ಡೋಸ್‌ನ್ನೂ 68,626 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ. ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News