ಕೋಸ್ಟ್‌ಗಾರ್ಡ್, ನೌಕಾಪಡೆಯ ಜಂಟಿ ಕಾರ್ಯಾಚರಣೆ: ಕೋರಮಂಡಲ್ ಸಪೋರ್ಟರ್ ಮಿನಿ ನೌಕೆಯ ಸಿಬ್ಬಂದಿ ರಕ್ಷಣೆ

Update: 2021-05-17 15:42 GMT

ಮಂಗಳೂರು, ಮೇ 16: ಕಾಪು ದ್ವೀಪ ಸ್ತಂಭದಿಂದ 6 ಕಿ.ಮೀ. ದೂರದ ಸಮುದ್ರದಲ್ಲಿ ಬಂಡೆಯ ನಡುವೆ ಅಪಾಯದಲ್ಲಿ ಸಿಲುಕಿದ್ದ ಕೋರಮಂಡಲ ಸಪೋರ್ಟರ್ 9 ಮಿನಿ ನೌಕೆಯಲ್ಲಿದ್ದ 9 ಮಂದಿ ಸಿಬ್ಬಂದಿಯನ್ನು ಕೋಸ್ಟ್‌ಗಾರ್ಡ್ ಹಾಗೂ ನೌಕಾಪಡೆಯ ಹೆಲಿಕಾಪ್ಟರ್‌ನ ಜಂಟಿ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ.

ಸದ್ಯ ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಪಣಂಬೂರಿನ ಎನ್‌ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಶ್ಚಿಮ ಬಂಗಾಲದವರಾದ ಮೊಯ್ದಿನ್ ಮುಲ್ಲಾ ಖಾನ್(40), ಶಂತನು ಕುಮಾರ್ (23), ತುಷನ್ ಬಿಸ್ವಾಸ್ (29), ಬಿಹಾರದವರಾದ ಲಕ್ಷ್ಮೀನಾರಾಯಣ್ (24), ಗೌರವ್ ಕುಮಾರ್ (27), ತಮಿಳುನಾಡಿನರಾದ ಪ್ರಶಾಂತ್ ಸುಬ್ರಹ್ಮಣ್ಯಂ (29), ದೀಪಕ್ ದಿನೇಶ್ (22), ಉತ್ತರ ಪ್ರದೇಶದ ರೌದ್ ಅಹಮದ್ (26), ರಾಹುಲ್ ಮಂಜುದಾರ್ (26) ರಕ್ಷಣೆಗೊಳಗಾದವರು.

ಎಂಆರ್‌ಪಿಎಲ್‌ನಲ್ಲಿ ಖಾಸಗಿ ಸಂಸ್ಥೆಯಡಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋರಮಂಡಲ ಸಪೋರ್ಟರ್ 9 ಎಂಬ ನೌಕೆ ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಎನ್‌ಎಂಪಿಟಿಗೆ ವರದಿ ದೊರಕಿತ್ತು. ಕಳೆದ ಮೂರು ದಿನಗಳಿಂದ ದ.ಕ. ಜಿಲ್ಲಾಡಳಿತ, ಕೋಸ್ಟ್‌ಗಾರ್ಡ್ ಮತ್ತು ಎನ್‌ಎಂಪಿಟಿಯಿಂದ ಹುಡುಕುವ ಪ್ರಯತ್ನ ನಡೆದಿತ್ತು.

ನಿನ್ನೆ ವಾಟ್ಸಾಪ್ ಮೂಲಕ ಅವರು ಕಾಪು ದ್ವೀಪ ಸ್ತಂಭದಿಂದ 6 ಕಿ.ಮೀ. ದೂರದ ಮುಲ್ಕಿ ಹಾಗೂ ಕಾಪುವಿನ ನಡುವಿನ ಬಂಡೆಯ ನಡುವೆ ಸಿಲುಕಿರುವ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್‌ನಿಂದ ರಕ್ಷಣಾ ಪ್ರಯತ್ನ ನಡೆಸಲಾಯಿತು. ಅಲೆಗಳ ಹೊಡೆತದಿಂದ ಆ ನೌಕೆಯ ಬಳಿ ಕೋಸ್ಟ್‌ಗಾರ್ಡ್‌ಗೆ ತಲುಪಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಜತೆ ಮಾತನಾಡಿ ಎರಡು ನೌಕಾ ಹೆಲಿಕಾಪ್ಟರ್ ತರುವ ಪ್ರಯತ್ನವಾಗಿತ್ತು. ಗೋವಾದಿಂದ ಹೊರಟಾಗ ಅಲ್ಲಿ ಭೀಕರ ಗಾಳಿ, ಕೊಚ್ಚಿಯಲ್ಲಿ ಮಳೆಯಿಂದ ಏರ್‌ಪೋರ್ಟ್ ಬಂದಾಗಿತ್ತು. ಹಾಗಾಗಿ ನಿನ್ನೆ ಹೆಲಿಕಾಪ್ಟರ್ ಇಳಿಯಲು ಸಾಧ್ಯವಾಗಲಿಲ್ಲ. ಇಂದು ಬೆಳಗ್ಗೆ 6 ಗಂಟೆಗೆ ಕೊಚ್ಚಿನ್‌ನಿಂದ ಹೆಲಿಕಾಪ್ಟರ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಲ್ಲಿಂದ ಘಟನಾ ಸ್ಥಳಕ್ಕೆ ತೆರಳಿ ಕೋಸ್ಟ್‌ಗಾರ್ಡ್ ಜತೆ ಕಾರ್ಯಾಚರಣೆ ನಡೆಸಿ ಒಂಭತ್ತು ಮಂದಿಯನ್ನು ರಕ್ಷಿಸಲಾಗಿದೆ ಎಂದು ಎನ್‌ಎಂಪಿಟಿ ಆಸ್ಪತ್ರೆಯಲ್ಲಿ ರಕ್ಷಣೆಗೊಳಗಾದ ಸಿಬ್ಬಂದಿಯನ್ನು ಭೇಟಿ ಮಾಡಿದ ಬಳಿಕ ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.

ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಡಾ.ವೈ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕುಮಾರ್, ಎನ್‌ಎಂಪಿಟಿ ಅಧ್ಯಕ್ಷ ಎ.ವಿ. ರಮಣ್ ಭೇಟಿ ನೀಡಿ ಮಾತನಾಡಿದರು.

‘‘ಕೋರಮಂಡಲ ಸಪೋರ್ಟರ್ 9 ಮಿನಿ ನೌಕೆಯಿಂದ ರಕ್ಷಿಸಲ್ಪಟ್ಟ 9 ಮಂದಿಯೂ ಆರೋಗ್ಯವಂತರಾಗಿದ್ದಾರೆ. ಹಾಗಿದ್ದರೂ 24 ಗಂಟೆ ಅವರನ್ನು ನಿಗಾ ಇರಿಸಲಾಗುವುದು. ಅವರ ಕೋವಿಡ್ ತಪಾಸಣೆ ಮಾಡಲಾಗುವುದು.’’
-ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

''ಎಂಆರ್‌ಪಿಎಲ್‌ನ ಹೊರಗುತ್ತಿಗೆ ಮುಗಿದಿದ್ದ ಅಟ್ಲಾಂಟಿಕ್ ಶಿಪ್ಪಿಂಗ್ ಕಂಪನಿಗೆ ಸೇರಿರುವ ಕೋರಮಂಡಲ್ ಸಪೋರ್ಟರ್ 9 ಆ್ಯಂಕರೇಜ್‌ ನಲ್ಲಿತ್ತು. ಅವರು ಆ್ಯಂಕರ್ ತೆಗೆಯುವಾಗ ನಮಗೆ ಮಾಹಿತಿ ನೀಡಿಲ್ಲ. ಸಮಸ್ಯೆಗೆ ಸಿಲುಕಿದ ಬಳಿಕವಷ್ಟೇ ಮಾಹಿತಿ ನೀಡಿದ್ದಾರೆ. ಆದರೂ ನಾವು ಕೋಸ್ಟ್‌ಗಾರ್ಡ್, ಕೋಸ್ಟಲ್ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಟಗ್ ಅಲಾಯನ್ಸ್ ಕೂಡಾ ಮೇ 14ರಂದು ರಾತ್ರಿಯೇ ಬರಬೇಕಿತ್ತು. ಆದರೆ ಬಂದಿಲ್ಲ. ಮರುದಿನ ಬರುವುದಾಗಿ ಸಂದೇಶ ಕಳಿಸಿದರೂ ಬರಲಿಲ್ಲ. ಅವರು ಕೂಡಾ ಅದು ರಾಡಾರ್ ಪರದೆಯಿಂದ ನಾಪತ್ತೆಯಾದ ಕೂಡಲೇ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದೇವೆ.

- ಎ.ವಿ. ರಮಣ, ಅಧ್ಯಕ್ಷರು, ಎನ್‌ಎಂಪಿಟಿ.

ಕೋಸ್ಟ್‌ಗಾರ್ಡ್‌ನ ರೋಮಾಂಚಕ ಕಾರ್ಯಾಚರಣೆ, ದೈತ್ಯ ಅಲೆಗಳ ನಡುವೆ 50 ಗಂಟೆಗಳ ಸೆಣಸಾಟ!

ಚಂಡಮಾರುತದಿಂದಾಗಿ ಸಮುದ್ರದ ಅಲೆಗಳು ರೌದ್ರಾವತಾರ ತಾಳಿದ್ದರೆ, ಅಲ್ಲಿ ಅದಾಗಲೇ ಅಪಾಯದಲ್ಲಿ ಸಿಲುಕಿ ಭಯದಿಂದ ಪ್ರಾಣ ರಕ್ಷಣೆಗಾಗಿ ಮೊರೆಯಿಡುತ್ತಿದ್ದವರತ್ತ ಸಾಗುವುದು ಕೋಸ್ಟ್ ಗಾರ್ಡ್‌ಗೂ ಸವಾಲಾಗಿತ್ತು. ಆದಾಗ್ಯೂ ಡಿಐಜಿ ಎಸ್.ಬಿ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ವರಾಹ ಹಡಗು ಮೂಲಕ ಕೋಸ್ಟ್‌ಗಾರ್ಡ್ ಸಿಬ್ಬಂದಿ ಸಮುದ್ರದ ದೈತ್ಯ ಅಲೆಗಳ ನಡುವೆ ಸುಮಾರು 50 ಗಂಟೆಗಳ ಕಾಲ ಅಪಾಯದಲ್ಲಿದ್ದವರ ರಕ್ಷಣೆಗಾಗಿ ಸೆಣಸಾಡಿದ್ದಾರೆ. ಕಾಪು ಲೈಟ್‌ಹೌಸ್‌ನಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರದ ಮಧ್ಯೆ ಬಂಡೆಗಳ ನಡುವೆ ಸಿಲುಕಿದ್ದ ಕೋರಮಂಡಲ್ ಸಪೋರ್ಟರ್ 9 ಹೆಸರಿನ ಮಿನಿ ನೌಕೆಯತ್ತ ತಲುಪಲು ಯತ್ನಿಸುವ ಕೋಸ್ಟ್‌ಗಾರ್ಡ್ ಸಿಬ್ಬಂದಿಯ ಕಾರ್ಯಾಚರಣೆಯ ವೀಡಿಯೋ ದೃಶ್ಯವೇ ರೋಮಾಂಚಕಾರಿ. ಇಂದು ಬೆಳಗ್ಗೆ ನೌಕಾಪಡೆಯ ಹೆಲಿಕಾಪ್ಟರ್ ಕೋಸ್ಟ್‌ಗಾರ್ಡ್ ಕಾರ್ಯಾಚರಣೆಗೆ ಸಾಥ್ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News