ಚಂಡಮಾರುತ: ಸಹಜ ಸ್ಥಿತಿಯತ್ತ ಉಡುಪಿಯ ಕರಾವಳಿ ಪ್ರದೇಶ

Update: 2021-05-17 15:56 GMT

ಉಡುಪಿ, ಮೇ 17: ತೌಕ್ತೆ ಚಂಡಮಾರುತದ ಪರಿಣಾಮದಿಂದ ಕಳೆದ ಎರಡು ದಿನಗಳ ಕಾಲ ತತ್ತರಿಸಿದ್ದ ಉಡುಪಿ ಜಿಲ್ಲೆಯ ಕರಾವಳಿ ಪ್ರದೇಶ ಇದೀಗ ಸಹಜ ಸ್ಥಿತಿಗೆ ಮರಳಿದೆ. ಕಡಲಿನ ಅಬ್ಬರ ಹಾಗೂ ಗಾಳಿಯ ತೀವ್ರತೆ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ಕಳೆದ 24ಗಂಟೆಗಳ ಅವಧಿಯಲ್ಲಿ ಸರಾಸರಿ 32.2 ಮಿ.ಮೀ. ಮಳೆಯಾಗಿದ್ದು, ಉಡುಪಿ ತಾಲೂಕಿನಲ್ಲಿ 24.0ಮಿ.ಮೀ., ಬ್ರಹ್ಮಾವರ- 32.0, ಕಾಪು-21.0, ಬೈಂದೂರು-42.0, ಕಾರ್ಕಳ- 23.0, ಕುಂದಾಪುರ-45.0, ಹೆಬ್ರಿ-21.0ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಬೆಳಗ್ಗೆಯಿಂದ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ತುಂತುರು ಮಳೆಯಾಗಿ ರುವ ಬಗ್ಗೆ ವರದಿಯಾಗಿದೆ. ಉಳಿದ ಸಮಯ ಮೋಡ ಕವಿದ ವಾತಾವರಣ, ಗುಡುಗು ಹಾಗೂ ಬಿಸಿಲು ಕಂಡುಬಂದಿದೆ. ಮಲ್ಪೆ, ಕಾಪು, ಮರವಂತೆ, ಪಡುಬಿದ್ರೆ ಬೀಚ್‌ಗಳಲ್ಲಿ ಸಮುದ್ರ ನೀರು ಇಳಿಕೆಯಾಗಿದೆ.
ಕಳೆದ ರಾತ್ರಿಯಿಂದ ಗಾಳಿಮಳೆಗೆ ಉಡುಪಿ ಜಿಲ್ಲೆಯಲ್ಲಿ ಮೆಸ್ಕಾಂಗೆ ಒಟ್ಟು 17.07ಲಕ್ಷ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಉಡುಪಿ ತಾಲೂಕಿನಲ್ಲಿ 59 ಕಂಬಗಳು, ಕುಂದಾಪುರದಲ್ಲಿ 64 ಕಂಬಗಳು ಸೇರಿದಂತೆ ಒಟ್ಟು 123 ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಇದರಿಂದ ಒಟ್ಟು 11.13 ಲಕ್ಷ ರೂ. ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ 2 ಟ್ರಾನ್ಸ್‌ಫಾರ್ಮರ್‌ಗಳು, 5.65 ಕಿ.ಮೀ. ಉದ್ದದ ವಿದ್ಯುತ್ ತಂತಿಗಳಿಗೆ ಹಾನಿಯಾಗಿವೆ.

ಹಾನಿಗೀಡಾದ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಆಳವಡಿಸುವ ಕಾರ್ಯ ಇಂದು ಕೂಡ ಜಿಲ್ಲೆಯಲ್ಲಿ ಮುಂದುವರೆದಿದ್ದು, ಕೆಲವು ಗ್ರಾಮಗಳು ಕಳೆದ ರಾತ್ರಿ ಕೂಡ ವಿದ್ಯುತ್ ಇಲ್ಲದೆ ಕತ್ತಲಿನಲ್ಲಿಯೇ ದಿನದೂಡಿದೆ. ಅಲ್ಲಲ್ಲಿ ಬಿದ್ದ ಮರಗಳನ್ನು ಈಗಾಗಲೇ ತೆರವುಗೊಳಿಸಲಾಗಿ ರುವ ಬಗ್ಗೆ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News