ಕಾಪು ಸಮುದ್ರ ಮಧ್ಯೆ ಸಿಲುಕಿದ ಕೋರಮಂಡಲ್ ಟಗ್ : 40 ಗಂಟೆಗಳ ವಿಳಂಬ ಕಾರ್ಯಾಚರಣೆಗೆ ಅಸಮಾಧಾನ

Update: 2021-05-17 15:59 GMT

ಕಾಪು, ಮೇ 17: ಕಾಪು ಲೈಟ್‌ನ ಹೌಸ್‌ನ ಐದು ನಾಟೆಕಲ್ ದೂರದಲ್ಲಿ ಸಿಲುಕಿರುವ ಕೋರಮಂಡಲ್ ಎಕ್ಸ್‌ಪ್ರೆಸ್ ಟಗ್‌ನಲ್ಲಿದ್ದ ಒಂಭತ್ತು ಮಂದಿ ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ 40 ಗಂಟೆ ವಿಳಂಬವಾಗಿ ನಡೆಸಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ರಕ್ಷಣಾ ಕಾರ್ಯಾಚರಣೆ ಆಗಮಿಸಿದ ನೌಕದಳದ ಹೆಲಿಕಾಪ್ಟರ್ ಬೆಳಗ್ಗೆ ಕಾಪು ಪರಿಸರದಲ್ಲಿ ಸುತ್ತುವರಿಯುತ್ತಿತ್ತು. ಈ ಮಾಹಿತಿ ತಿಳಿದು ಕಾಪು ಲೈಟ್ ಹೌಸ್ ಸಮೀಪ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಕಾರ್ಯಾಚರಣೆ ವೀಕ್ಷಣೆಗೆ ಜಮಾಯಿಸಿದ್ದರು. ಹೆಲಿಕಾಪ್ಟರ್ ಹಾಗೂ ಕೋಸ್ಟ್ ಗಾರ್ಡ್‌ನ ನೌಕೆಯ ಮೂಲಕ ನಡೆದ ಕಾರ್ಯಾಚರಣೆಯನ್ನು ತೀರದಲ್ಲಿ ನಿಂತು ಜನ ವೀಕ್ಷಿಸಿದರು. ಹೀಗೆ ತಂಡೋಪತಂಡವಾಗಿ ಬೀಚ್‌ಗೆ ಆಗಮಿಸಿದ ಜನರನ್ನು ಪೊಲೀಸರು ಚದುರಿಸಿದರು.

ನಿನ್ನೆಯಿಂದ ಕಾಪು ಲೈಟ್ ಹೌಸ್ ಸಮೀಪ ಬೀಡುಬಿಟ್ಟಿರುವ ಕಂಪೆನಿಯ ಮ್ಯಾನೇಜರ್ ವೇಲು ಅವರಿಗೆ, ಟಗ್‌ನಲ್ಲಿದ್ದ ಸಿಬ್ಬಂದಿಗಳು, ನಮ್ಮನ್ನು ರಕ್ಷಿಸಿ ಎಂದು ಕಣ್ಣೀರು ಹಾಕುತ್ತ ವೀಡಿಯೋ ಸಂದೇಶವನ್ನು ಕಳುಹಿಸಿದ್ದರು. ಮೇ 16ರಂದು ಬೆಳಗ್ಗೆ 7.30ಕ್ಕೆ ಬಂದ ಈ ವಿಡಿಯೋ ಸಂದೇಶದ ಬಗ್ಗೆ ಕೋಸ್ಟ್ ಗಾರ್ಡ್‌ಗೆ ಮಾಹಿತಿ ನೀಡಲಾಗಿತ್ತು. ಆದರೆ ಕೋಸ್ಟ್ ಗಾರ್ಡ್ ಯಾವುದೇ ಕಾರ್ಯಾಚರಣೆಗೆ ಮುಂದಾಗಿರಲಿಲ್ಲ. ಇವರ ವಿಳಂಬ ದಿಂದ ಅನಾಹುತ ಸಂಭವಿಸುತ್ತಿದ್ದರೆ ಯಾರು ಜವಾಬ್ದಾರರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಈ ಮಧ್ಯೆ ಸ್ಥಳೀಯ ಮೀನುಗಾರರು ಹಾಗು ಮುಳುಗು ತಜ್ಞರು ರಕ್ಷಣೆಗೆ ಮುಂದಾದರೂ ಸಮರ್ಪಕ ವ್ಯವಸ್ಥೆ ಇಲ್ಲದೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಸರಕಾರ ನಮಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಟ್ಟರೆ ನಾವೇ ಸಮುದ್ರ ಮಧ್ಯೆಗೆ ತೆರಳಿ ಟಗ್‌ನಲ್ಲಿದ್ದ ಎಲ್ಲರನ್ನು ಸುರಕ್ಷಿತವಾಗಿ ಕರೆತರುತ್ತೇವೆ ಎಂದು ಸ್ಥಳೀಯ ಮೀನುಗಾರ ಯುವಕರು ಧೈರ್ಯದಿಂದ ಹೇಳಿಕೊಂಡಿದ್ದರು.

ಉಡುಪಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್, ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಪ್ರವೀಣ್ ನಾಯಕ್, ಕಾಪು ವೃತ್ತ ಪೊಲೀಸ್ ನಿರೀಕ್ಷಕ ಪ್ರಕಾಶ್, ಹೆಜಮಾಡಿ ಕರಾವಳಿ ಕಾವಲು ಪಡೆಯ ನಿರೀಕ್ಷಕಿ ಸುಜಾತಾ, ಕಾಪು ಎಸ್ಸೈ ರಾಘವೇಂದ್ರ, ಅಪರಾಧ ವಿಭಾಗದ ಎಸ್ಸೈ ದಿನೇಶ್ ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರು.

ಸ್ಥಳದಲ್ಲಿ ಶಾಸಕ ಲಾಲಾಜಿ ಮೆಂಡನ್, ಪುರಸಭಾ ಅಧ್ಯಕ್ಷ ಅನಿಲ್ ಕಾಪು, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಗಾವ್ಕರ್ ಹಾಜರಿದ್ದರು.

ಟಗ್‌ನಲ್ಲಿದ್ದ ಎಲ್ಲರು ನಮ್ಮಂದಿಗೆ ಏಳು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿ ದ್ದಾರೆ. ನಾವೆಲ್ಲರೂ ಒಂದೇ ಕುಟುಂಬದವರಂತೆ ಬದುಕುತ್ತಿದ್ದೇವೆ. ನಮ್ಮಲ್ಲಿ ಒಬ್ಬರಿಗೆ ನೋವಾದರೆ ಎಲ್ಲರಿಗೂ ನೋವು ಆಗುತ್ತದೆ. ನಮ್ಮ ಈ ಕಾರ್ಯಾ ಚರಣೆಗೆ ಸಹಕರಿಸಿದ ವಿವಿಧ ಇಲಾಖೆಯ ಅಧಿಕಾರಿ ವರ್ಗಗಳಿಗೂ ಹಾಗೂ ದಿನವಿಡೀ ನಮ್ಮೊಂದಿಗೆ ಇದ್ದು, ಧೈರ್ಯ ತುಂಬಿದ ಸ್ಥಳೀಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
- ವೇಲು, ಮ್ಯಾನೇಜರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News