ಉಡುಪಿ ಜಿಲ್ಲೆಯಲ್ಲಿ ಗಾಳಿ-ಮಳೆ: ಪಳ್ಳಿ, ನಿಟ್ಟೆಯ ಶಾಲೆಗಳಿಗೆ ಹಾನಿ

Update: 2021-05-17 16:37 GMT

ಉಡುಪಿ, ಮೇ 17: ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ಬೀಸಿದ ಬಿರುಗಾಳಿಯಿಂದ ಕೂಡಿದ ಮಳೆಯಿಂದ ಕಾರ್ಕಳ ತಾಲೂಕಿನ ಎರಡು ಶಾಲೆಗಳಿಗೆ ಹಾನಿಯಾಗಿದ್ದಲ್ಲದೇ, ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆಯ ವನಜ ಶೆಡ್ತಿ ಎಂಬವರ ಅಡಿಕೆ ಹಾಗೂ ಬಾಳೆ ತೋಟಕ್ಕೆ ಅಪಾರ ಹಾನಿಯಾಗಿದೆ.

ರವಿವಾರ ಬೀಸಿದ ಗಾಳಿಗೆ ಪಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಡಿನ ಹೆಂಚುಗಳು ಹಾರಿಹೋಗಿವೆ. ಹಾಗೂ ನಿಟ್ಟೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಬಿದ್ದು ಹೋಗಿರುವ ಬಗ್ಗೆ ವರದಿಗಳು ಬಂದಿವೆ.

ಕಾಪು ತಾಲೂಕಿನ ಬೆಳ್ವೆ, ಮಟ್ಟು, ಪಲಿಮಾರು, ಇನ್ನಂಜೆ, ಉಳಿಯಾರಗೋಳಿ ಹಾಗೂ ಯೇಣಗುಡ್ಡೆಯ ಹಲವು ಮನೆ, ಕೊಟ್ಟಿಗೆಗಳಿಗೆ ಲಕ್ಷಾಂತರ ರೂ.ಗಳ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕು ಕೋಟೇಶ್ವರದ ಐದಾರು, ಕೆದೂರು, ಕಂದಾವರ, ಬೀಜಾಡಿಯ ಮೂರು, ಗುಜ್ಜಾಡಿ ಗ್ರಾಮದ ಆರು ಮನೆಗಳಿಗೆ ಬಾಗಶ: ಹಾನಿಯಾಗಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.

ಅದೇ ರೀತಿ ಬ್ರಹ್ಮಾವರ ತಾಲೂಕಿನ ಬೈಕಾಡಿ, ಚಿತ್ರಪಾಡಿ, ಹೆಗ್ಗುಂಜೆ, ಕಾರ್ಕಳ ತಾಲೂಕಿನ ಮುಂಡ್ಕೂರು, ಕೌಡೂರು, ಎಳ್ಳಾರೆ ಗ್ರಾಮಗಳ ಹಲವು ಮನೆಗಳಿಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು, ಲಕ್ಷಾಂತರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

32.2ಮಿ.ಮೀ. ಮಳೆ: ಉಡುಪಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 32.2ಮಿ.ಮೀ. ಮಳೆ ಯಾಗಿದೆ. ಜಿಲ್ಲೆಯ ಕುಂದಾಪುರದಲ್ಲಿ 45ಮಿ.ಮೀ., ಬೈಂದೂರು 42, ಕುಂದಾಪುರ 32, ಉಡುಪಿ 24, ಕಾರ್ಕಳ 23, ಹೆಬ್ರಿ ಮತ್ತು ಕಾಪು ತಲಾ 21ಮಿ.ಮೀ. ಮಳೆಯಾಗಿದೆ.

ಮುನ್ನೆಚ್ಚರಿಕೆ: ಮುಂದಿನ ಮೂರು ದಿನಗಳ ಕಾಲ ಕರಾವಳಿಯ ಜಿಲ್ಲೆಗಳಲ್ಲಿ ಬಿರುಗಾಳಿ- ಮಿಂಚಿನೊಂದಿಗೆ ಭಾರೀ ಮಳೆ ಸುರಿಯುವ ಮುನ್ಸೂ ಚನೆಯನ್ನು ಬೆಂಗಳೂರಿನ ಹವಾಮಾನ ಕೇಂದ್ರ ನೀಡಿದೆ. ಈ ದಿನಗಳಲ್ಲಿ ಜಿಲ್ಲೆಯ ಅಲ್ಲಲ್ಲಿ 64.5ಮಿ.ಮೀ. ನಿಂದ 115.5ಮಿ.ಮೀ.ಗಳಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News