ಸಸಿಹಿತ್ಲು ಮುಂಡಾ ಬೀಚ್ ಉಳಿವಿಗಾಗಿ ಅಭಿಯಾನ: ಅಭಯಚಂದ್ರ ಜೈನ್-ಮಿಥುನ್ ರೈ ಘೋಷಣೆ

Update: 2021-05-17 17:15 GMT

ಮಂಗಳೂರು, ಮೇ 17: ತೌಕ್ತೆ ಚಂಡಮಾರುತ ಅಬ್ಬರಕ್ಕೆ ಸಿಲುಕಿದ ಸಸಿಹಿತ್ಲು ಸಮೀಪದ ಮುಂಡಾ ಬೀಚ್‌ಗೆ ಸಾಕಷ್ಟು ಹಾನಿಯಾಗಿದೆ. ಇದಕ್ಕೆ ದ.ಕ.ಜಿಲ್ಲಾಡಳಿತ ಮತ್ತು ರಾಜ್ಯ ಬಿಜೆಪಿ ಸರಕಾರವೇ ನೇರ ಹೊಣೆ ಎಂದು ಆಪಾದಿಸಿದ ಕಾಂಗ್ರೆಸ್ ಮುಖಂಡರಾದ ಅಭಯಚಂದ್ರ ಜೈನ್ ಮತ್ತು ಮಿಥುನ್ ರೈ, ಸರಕಾರ ಈ ಬೀಚ್ ಉಳಿವಿಗೆ ಪ್ರಯತ್ನಿಸದೇ ಇದ್ದರೆ ಲಾಕ್‌ಡೌನ್ ಮುಗಿದ ಬಳಿಕ ಅಭಿಯಾನ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಚಂಡಮಾರುತದಿಂದ ತೀವ್ರ ಹಾನಿಗೊಳಗಾದ ಸಸಿಹಿತ್ಲು ಮುಂಡಾ ಬೀಚ್‌ಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎರಡು ನದಿಗಳು ಸಮುದ್ರಕ್ಕೆ ಸೇರುವ ಸಂಗಮ ಸ್ಥಳವಾದ ‘ಮುಂಡಾ’ ಬೀಚ್ ಮೊನ್ನೆಯ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಲುಗಿದೆ. ಇದರ ರಕ್ಷಿಸುವಂತೆ ಮೂರು ತಿಂಗಳ ಹಿಂದೆಯೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವೊಬ್ಬ ಜನಪ್ರತಿನಿಧಿ ಕೂಡ ಇದರ ಉಳಿವಿಗಾಗಿ ಪ್ರಯತ್ನಿಸಲೇ ಇಲ್ಲ. ಇದೊಂದು ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಇದನ್ನು ಉಳಿಸಲು ಹೊರ ಜಿಲ್ಲೆಯವರು ಪ್ರಯತ್ನಿಸುವ ಆಸಕ್ತಿ ಹೊಂದಿದ್ದರೂ ಕೂಡ ಜಿಲ್ಲಾಡಳಿತ ಮತ್ತು ಈ ಭಾಗದ ಜನಪ್ರತಿನಿಧಿಗಳು ಆಸಕ್ತಿ ವಹಿಸಲೇ ಇಲ್ಲ. ಬೀಚ್ ಜೊತೆಗೆ ಕೃಷಿ ಭೂಮಿಗೂ ಹಾನಿಯಾಗಿದೆ. ಈಗಾಗಲೆ ರಾಷ್ಟ್ರಮಟ್ಟದ ಸರ್ಫಿಂಗ್ ಉತ್ಸವ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಉತ್ಸವ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಹೊಂದಿದ್ದ ಬೀಚ್‌ಗೆ ಹಾನಿಯಾಗಲು ಸರಕಾರದ ನಿರ್ಲಕ್ಷವೇ ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಪಾದಿಸಿದರು.

ಕೊಳವೈಲು ಕೃಷಿಭೂಮಿಗೆ ಹಾನಿ

ಮುಲ್ಕಿ ಸಮೀಪದ ಪಾವಂಜೆ ಗ್ರಾಮದ ಕೊಳವೈಲುವಿನಲ್ಲಿ ಭಾರೀ ಮಳೆ ಮತ್ತು ಕಡಲ್ಕೊರೆತದಿಂದ ಕೃಷಿ ಭೂಮಿಗೆ ಹಾನಿಯಾಗಿದೆ. ಇಲ್ಲಿನ ಜನರು ಉಪ್ಪು ನೀರು ಕುಡಿದು ಬದುಕುವಂತಹ ದುಸ್ಥಿತಿ ಎದುರಾಗಿದೆ. ನೂರಾರು ರೈತರ ಕೃಷಿಭೂಮಿಗೂ ಹಾನಿಯಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಶಾಸಕರು, ಸಚಿವರು, ಸಂಸದರು ಹೀಗೆ ಎಲ್ಲರಿಗೂ ಸಮಸ್ಯೆಯ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಯಾರೂ ಕೂಡ ಈವರೆಗೆ ಸ್ಪಂದಿಸಿಲ್ಲ. ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ಪ್ರಯತ್ನ ದಿಂದಾಗಿ ಇಲ್ಲಿನ ಕಿಂಡಿ ಅಣೆಕಟ್ಟಿನ ನೀರು ತೆರವುಗೊಳಿಸಲಾಗಿದೆ. ಇದರಿಂದ ನಾವು ಸ್ವಲ್ಪ ನೆಮ್ಮದಿಯಿಂದಿರುವಂತಾಗಿದೆ ಎಂದು ಪಾವಂಜೆ ಗ್ರಾಪಂ ಮಾಜಿ ಅಧ್ಯಕ್ಷ ಮಹಾಬಲ ಸಾಲ್ಯಾನ್ ಮತ್ತು ಜಗದೀಶ್ ಎಂಬವರು ಹೇಳಿದ್ದಾರೆ.

ಈ ಸಂದರ್ಭ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಧನಂಜಯ ಮಟ್ಟು, ವಸಂತ ಬರ್ನಾಡ್, ಟಿಕೆ ಸುಧೀರ್, ಪ್ರವೀಣ್ ಬೊಳ್ಳೂರು, ಸತೀಶ್, ಪುತ್ತುಬಾವ, ಅಶೋಕ್ ಪೂಜಾರಿ,ಚಂದ್ರು, ಅನಿಲ್, ಧನರಾಜ್ ಮತ್ತಿತರರಿದ್ದರು.

ಸಿಹಿ ನೀರಿನ ಬದಲು ಉಪ್ಪು ನೀರು ಕುಡಿದಯ ಬದುಕುವಂತಹ ಸ್ಥಿತಿ ಎದುರಿಸುತ್ತಿರುವ ಈ ಪರಿಸರದ ಸುಮಾರು 85ಕ್ಕೂ ಅಧಿಕ ಕುಟುಂಬಗಳಿಗೆ ಕಾಂಗ್ರೆಸ್ ನಾಯಕ ಮಿಥುನ್ ರೈ ತಲಾ 20 ಲೀ. ನೀರನ್ನು ಹಂಚಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News