ಮಂಗಳೂರು : 24ರ ಹರೆಯದ ಗರ್ಭಿಣಿ ಪೊಲೀಸ್ ಸಿಬ್ಬಂದಿ ಕೋವಿಡ್‌ಗೆ ಬಲಿ

Update: 2021-05-18 06:50 GMT

ಮಂಗಳೂರು, ಮೇ 18: ದ.ಕ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 24ರ ಹರೆಯದ ಶಾಮಿಲಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಕೋಲಾರದವರಾದ ಶಾಮಿಲಿ 7 ತಿಂಗಳ ಗರ್ಭಿಣಿಯಾಗಿದ್ದು, ಕೋಲಾರದ ಆರ್‌ಎಂ ಜಾಲಪ್ಪ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 4.30ಕ್ಕೆ ನಿಧನರಾಗಿದ್ದಾರೆ.

ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಅವರು ರಜೆಯ ಮೇಲೆ ತಮ್ಮ ಊರಿಗೆ ತೆರಳಿದ್ದರು. ಮೇ 2ರಂದು ಕೋವಿಡ್ ಪಾಸಿಟಿವ್ ಆಗಿ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಕೋಲಾರದ ಎಸ್‌ಪಿಯವರು ಶಾಮಿಲಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ಮುತುವರ್ಜಿ ವಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗರ್ಭಿಣಿಯಾಗಿದ್ದ ಕಾರಣ ಅವರು ಲಸಿಕೆಯನ್ನು ಪಡೆದುಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

2021ರ ಜನವರಿ 11ರಂದು ದ.ಕ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಕೆ ಪ್ರೊಬೆಷನರಿ ಪಿಎಸ್‌ಐ ಆಗಿ ಕರ್ತವ್ಯ ಆರಂಭಿಸಿದ್ದರು. ಪೊಲೀಸ್ ಕುಟುಂಬದ ಯುವ ಸದಸ್ಯೆ ಕೋವಿಡ್‌ಗೆ ಬಲಿಯಾಗಿರುವ ಬಗ್ಗೆ ದು:ಖ ವ್ಯಕ್ತಪಡಿಸಿರುವ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿದ್ದು, ಮನೆಯಲ್ಲಿದ್ದುಕೊಂಡು ಪೊಲೀಸರೊಂದಿಗೆ ಸಹಕರಿಸಿ ಎಂದೂ ಮನವಿ ಮಾಡಿದ್ದಾರೆ. ದ.ಕ. ಜಿಲ್ಲಾ ಪೊಲೀಸ್ ಸೊನಾವಣೆ ಋಷಿಕೇಶ್ ಕೂಡಾ ಮೃತರ ಆತ್ಮಕ್ಕೆ ಶಾಂತಿಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News