​ಉಡುಪಿ ಮೆಸ್ಕಾಂನಿಂದ 117 ಮಾನ್ಸೂನ್ ಗ್ಯಾಂಗ್‌ಮೆನ್‌ಗಳ ನೇಮಕ

Update: 2021-05-18 07:36 GMT

ಉಡುಪಿ, ಮೇ 18: ಮಳೆಗಾಲದಲ್ಲಿ ಗಾಳಿಮಳೆಗೆ ಹೆಚ್ಚಿನ ಕಡೆಗಳಲ್ಲಿ ಎದುರಾ ಗುವ ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಉಡುಪಿ ಮೆಸ್ಕಾಂನಿಂದ ಜಿಲ್ಲೆಯಲ್ಲಿ ಮಾನ್ಸೂನ್ ಗ್ಯಾಂಗ್ ಮ್ಯಾನ್‌ಗಳ ನೇಮಕ ಮಾಡಲಾಗಿದ್ದು, ಈ ಮೂಲಕ ಮುಂದಿನ ಮಳೆಗಾಲಕ್ಕೆ ಮೆಸ್ಕಾಂ ಅಧಿಕಾರಿಗಳು ಈಗಾಲೇ ಸಿದ್ಧತೆ ಮಾಡಿಕೊಂಡಿದ್ದಾರೆ.

ಉಡುಪಿ ಮೆಸ್ಕಾಂ ವೃತ್ತದ ವ್ಯಾಪ್ತಿಯಲ್ಲಿ ಉಡುಪಿ ಹಾಗೂ ಕುಂದಾಪುರ ವಿಭಾಗಗಳಿವೆ. ಉಡುಪಿ ವಿಭಾಗದಲ್ಲಿ ಉಡುಪಿ ನಗರ, ಮಣಿಪಾಲ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ಮತ್ತು ಕುಂದಾಪುರ ವಿಭಾಗದಲ್ಲಿ ಕುಂದಾಪುರ, ಬೈಂದೂರು, ತಲ್ಲೂರು, ಕೋಟ ಉಪವಿಭಾಗಗಳಿವೆ.

ಮೆಸ್ಕಾಂ ಸಿಬ್ಬಂದಿಗಳು ಪ್ರತಿ ವರ್ಷ ಮೇ ತಿಂಗಳಲ್ಲಿ ಬೀಳುವ ಸ್ಥಿತಿಯಲ್ಲಿ ರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವ ಹಾಗೂ ಅದಕ್ಕೆ ತಾಗಿಕೊಂಡಿರುವ ಮರಗಳ ರೆಂಬೆಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಾರೆ. ಈ ಬಾರಿ ಅದಕ್ಕೆ ಹೆಚ್ಚಿನ ಸಿಬ್ಬಂದಿ ಆವಶ್ಯಕತೆ ಇರುವುದರಿಂದ ಮುಖ್ಯ ಮೆಸ್ಕಾಂ ಕೇಂದ್ರ ಕಚೇರಿಯಿಂದ ಉಡುಪಿ ವಿಭಾಗಕ್ಕೆ 61 ಗ್ಯಾಂಗ್ ಮ್ಯಾನ್ ಹಾಗೂ 7 ವಾಹನ ಮತ್ತು ಕುಂದಾಪುರ ವಿಭಾಗಕ್ಕೆ 56 ಸೇರಿದಂತೆ ಉಡುಪಿ ವೃತ್ತಕ್ಕೆ 117 ಗ್ಯಾಂಗ್ ಮೆನ್ ನೀಡಲಾಗಿದೆ.

700ಕ್ಕೂ ಅಧಿಕ ಲೈನ್‌ಮೆನ್ 

ಜಿಲ್ಲೆಯಲ್ಲಿ 700ಕ್ಕೂ ಅಧಿಕ ಲೈನ್‌ಮೆನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಮಾನ್ಸೂನ್ ಗ್ಯಾಂಗ್‌ಮೆನ್‌ಗಳು ಗುತ್ತಿಗೆ ಆಧಾರದ ಮೇಲೆ 3 ತಿಂಗಳ ಕಾಲ ಮಾತ್ರ ಕೆಲಸ ಮಾಡಲಿದ್ದಾರೆ.

ಪ್ರತಿ ವರ್ಷ ಎಪ್ರಿಲ್ ಕೊನೆಯಲ್ಲಿ ಮಳೆಗಾಲದ ಸಿದ್ಧತೆಗಳು ಪೂರ್ಣಗೊಳಿಸಲಾಗುತ್ತದೆ. ಆದರೆ ಈ ಬಾರಿ ಕೊರೋನ ಲಾಕ್‌ಡೌನ್‌ನಿಂದಾಗಿ ಮೇ ತಿಂಗಳ ಕೊನೆಯಲ್ಲಿ ಸಿದ್ಧತೆಗಳನ್ನು ಆರಂಭಿಸಲಾಗುತ್ತಿದೆ. ಮೆಸ್ಕಾಂ ಸಿಬಂದಿ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ, ಹಾನಿ ಸಂಭವಿಸಿದಾಗ ಮರು ಸಂಪರ್ಕಕ್ಕೆ ಬೇಕಾದ ಸಾಮಗ್ರಿಗಳನ್ನು ಈಗಲೇ ಸಿದ್ಧಪಡಿಸುತ್ತಿದ್ದಾರೆ.

2020-21ನೇ ಸಾಲಿನಲ್ಲಿ ಉಡುಪಿ ಹಾಗೂ ಕುಂದಾಪುರದಲ್ಲಿ 3,431 ವಿದ್ಯುತ್ ಕಂಬ, 859 ಟ್ರಾನ್ಸ್‌ಫಾರ್ಮರ್, 87.72 ಮೀ. ವಿದ್ಯುತ್ ತಂತಿ ಸೇರಿದಂತೆ 8.64 ಕೋ.ರೂ. ನಷ್ಟ ಉಂಟಾಗಿದೆ. 2019-20ನೇ ಸಾಲಿನಲ್ಲಿ ಸುರಿದ ಮಳೆಗೆ ಉಡುಪಿ ವಿಭಾಗದಲ್ಲಿ 2,830 ಕಂಬಗಳು, 617 ಟ್ರಾನ್ಸ್‌ಫಾರ್ಮರ್, 79.8 ಕಿ.ಮೀ. ಉದ್ದದ ವಿದ್ಯುತ್ ತಂತಿ ಹಾಗೂ ಕುಂದಾಪುರ ವಿಭಾಗದಲ್ಲಿ 1,595 ಕಂಬಗಳು, 272 ಟ್ರಾನ್ಸ್‌ ಫಾರ್ಮರ್‌ ಗಳು, 37.2 ಕಿ.ಮೀ. ಉದ್ದದ ವಿದ್ಯುತ್ ತಂತಿ ಸೇರಿದಂತೆ ಒಟ್ಟು 6.46 ಕೋ.ರೂ. ನಷ್ಟ ಉಂಟಾಗಿತ್ತು ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆಗಾಲದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ತೊಂದರೆಗಳನ್ನು ನಿವಾರಿಸಲು ಮೂರು ತಿಂಗಳ ಅವಧಿಗೆ ಮಾನ್ಸೂನ್ ಗ್ಯಾಂಗ್‌ನಲ್ಲಿ ಸಿಬ್ಬಂದಿ ಯನ್ನು ನಿಯೋಜಿಸಲಾಗಿದೆ. ಈಗಾಗಲೇ ಅದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿ ಮಾಡಲಾಗಿದೆ.
-ನರಸಿಂಹ ಪಂಡಿತ್, ಅಧೀಕ್ಷಕ ಅಭಿಯಂತರ, ಮೆಸ್ಕಾಂ, ಉಡುಪಿ ವೃತ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News