ಬೈಂದೂರು : ಜೋತು ಬಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಮೃತ್ಯು

Update: 2021-05-18 14:33 GMT

ಬೈಂದೂರು, ಮೇ 18: ವಿದ್ಯುತ್ ಕಂಬಗಳ ದುರಸ್ತಿ ವೇಳೆ ರಸ್ತೆಗೆ ಅಡಲಾಗಿ ಜೋತು ಬಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ಹೇರೂರು ಕಡೆಗೆ ಹೋಗುವ ಪಿಡಬ್ಲ್ಯೂಡಿ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಹೇರೂರು ಗ್ರಾಮದ ಯರುಕೋಣೆ ನಿವಾಸಿ ಶೇಖರ ಶೆಟ್ಟಿ ಎಂದು ಗುರುತಿಸಲಾಗಿದೆ.

ಮೇ 15ರಂದು ರಾತ್ರಿ ವಿಪರೀತ ಗಾಳಿ ಮಳೆಯಿಂದ ರಸ್ತೆಯ ಬದಿಯ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು 2 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿತ್ತು. ಮೇ 17ರಂದು ಮೆಸ್ಕಾಂ ಇಲಾಖೆಯಿಂದ ಇವುಗಳ ದುರಸ್ತಿ ಕಾರ್ಯ ಹಾಗೂ ವಿದ್ಯುತ್ ತಂತಿಗಳನ್ನು ಅಳವಡಿಸುವ ಕಾರ್ಯ ಮಾಡಲಾಗುತ್ತಿತ್ತು.

ಆದರೆ ಗುತ್ತಿಗೆದಾರರು ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಸೂಚನಾ ಫಲಕ, ಸಿಬ್ಬಂದಿಯನ್ನು ನೇಮಿಸದೆ ದುರಸ್ತಿ ಕಾರ್ಯ ಮಾಡುತ್ತಿದ್ದರು ಎನ್ನಲಾಗಿದ್ದು, ಕಂಬಕ್ಕೆ ವಿದ್ಯುತ್ ತಂತಿ ಜೋಡಿಸುತ್ತಿದ್ದ ಸಂದರ್ಭ ತಂತಿಯೊಂದು ತುಂಡಾಗಿ ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿತ್ತು. ಇದೇ ವೇಳೆ ಈ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಶೇಖರ ಶೆಟ್ಟಿ ತಂತಿಯನ್ನು ಗಮನಿಸದ ಕಾರಣ ತಂತಿ ಅವರ ಕುತ್ತಿಗೆ ಭಾಗಕ್ಕೆ ಸಿಲುಕಿಕೊಂಡಿತು. ಇದರಿಂದ ಅವರ ಕುತ್ತಿಗೆ ಮುರಿದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​5 ಲಕ್ಷ ರೂ. ಪರಿಹಾರ: ವಿದ್ಯುತ್ ತಂತಿಗೆ ಕುತ್ತಿಗೆ ಸಿಕ್ಕಿ ಸಾವನ್ನಪ್ಪಿದ ಹೇರೂರು ಗ್ರಾಮದ ಯೆರುಕೋಣೆಯ ನಿವಾಸಿ ಶೇಖರ ಶೆಟ್ಟಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಇಂದು ಮರವಂತೆ ಕಡಲ್ಕೊರೆತ ಪ್ರದೇಶ ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂದಾಯ  ಸಚಿವ ಆರ್.ಅಶೋಕ್ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News