‘ಶೋಕಿ ಮಾಡಲು ಬಂದಿರುವುದೇ ಹೊರತು ಸಮಸ್ಯೆ ಆಲಿಸಲು ಅಲ್ಲ’

Update: 2021-05-18 13:43 GMT

ಕುಂದಾಪುರ, ಮೇ 18: ‘ಬೆಂಗಳೂರಿನಿಂದ ಹೀಗೆ ಬಂದು ಹಾಗೆ ಹೋಗುವುದಾದರೆ ಇಲ್ಲಿಗೆ ಯಾಕೆ ಬರಬೇಕು. ಇನ್ನು ಯಾವುದೇ ಸಚಿವರು ಬಂದರೂ ನಾವು ಯಾರು ಹೋಗಬಾರದು. ಇವರು ಕೇವಲ ಫೋಟೊಗೆ ಪೋಸ್ ಕೊಟ್ಟು ಹೋಗುವುದಲ್ಲ. ಇವರು ಮೀನುಗಾರರ ಸಮಸ್ಯೆ ಗಳನ್ನು ಆಲಿಸಲು ಬಂದಿರೋದ ಅಥವಾ ಶೋಕಿ ಮಾಡಲು ಬಂದಿರುವುದಾ?...’

ತೌಕ್ತೆ ಚಂಡಮಾರುತದಿಂದ ಹಾನಿಗೀಡಾದ ಮರವಂತೆ ಕಡಲ್ಕೊರೆತ ಪ್ರದೇಶ ಗಳಿಗೆ ಇಂದು ಕಂದಾಯ ಸಚಿವ ಆರ್.ಅಶೋಕ್ ತರಾತುರಿ ಭೇಟಿ ನೀಡಿರುವ ಬಗ್ಗೆ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ ರೀತಿ ಇದು.

‘ಚಂಡಮಾರುತದಿಂದ ಶೆಡ್, ರಸ್ತೆ, ತೆಂಗಿನಮರ ಸೇರಿದಂತೆ ಎಲ್ಲವನ್ನು ಕಳೆದುಕೊಂಡಿದ್ದೇವೆ. ನಮ್ಮ ಸಮಸ್ಯೆಗಳನ್ನು ಆಲಿಸದೆ ಸಚಿವರು ತರಾತುರಿಯಲ್ಲಿ ವಾಪಾಸಾಗಿದ್ದಾರೆ. ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಫೋಟೊಗೆ ಪೋಸ್ ಕೊಟ್ಟು ಹೋಗುವುದಲ್ಲ’ ಎಂದು ಮೀನುಗಾರರು ಮಾಧ್ಯಮದ ಮುಂದೆ ಸಚಿವರ ನಡೆಯ ಬಗ್ಗೆ ಕಿಡಿಕಾರಿದರು.

ಚಂಡಮಾರುತದಿಂದ ನಮ್ಮ ತೆಂಗಿನ ಮರಗಳು ಕಡಲು ಸೇರಿಕೊಂಡಿವೆ. ಶೆಡ್ ಹಾಗೂ ನಮ್ಮ ಜೀವನಾಡಿಯಾಗಿದ್ದ ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ಇಷ್ಟೆಲ್ಲಾ ಕಳೆದುಕೊಂಡ ನಮಗೆ ಕಿಂಚಿತ್ ಸಾಂತ್ವಾನ ಹೇಳುವ ಸೌಜನ್ಯತೆ ಸಚಿವರಿಗಿಲ್ಲ. ನಮ್ಮ ಬೇಡಿಕೆಗಳನ್ನು ಆಲಿಸಿದೆ ನಮ್ಮ ಜೊತೆ ಚರ್ಚಿಸದೆ ಹಾಗೆಯೇ ವಾಪಾಸ್ಸು ಹೊರಟು ಹೋದರು. ಸ್ಥಳಕ್ಕೆ ಬಂದು ಐದೇ ನಿಮಿಷದಲ್ಲಿ ವಾಪಾಸ್ ತೆರಳಿದ ಸಚಿವರಿಗೆ ನಮ್ಮ ಬೇಡಿಕೆ ಕೇಳುವಷ್ಟು ಸಮಯ ಇಲ್ಲ. ಕೇವಲ ಭೇಟಿ ನೀಡಿ ಫೋಟೊ ಕ್ಲಿಕ್ಕಿಸಿಕೊಂಡು ಹೋದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಆಗುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಮನೆಗಳು ಸಮುದ್ರ ಪಾಲಾಗುವ ಭಯದಲ್ಲಿ ನಾವೆಲ್ಲರೂ ಜೊತೆಯಾಗಿ ಸೇರಿ ಮರಳಿನ ಚೀಲಗಳನ್ನು ತಡೆಗೋಡೆಯಾಗಿ ಮಾಡಿಕೊಂಡಿ ದ್ದೇವೆ. ನಮ್ಮ ಕುಟುಂಬಗಳ ರಕ್ಷಣೆಯ ಕಾರ್ಯ ನಾವೇ ಮಾಡುತ್ತಿದ್ದೇವೆ. ಆದರೆ ಇವರು ಫೋಟೋಗೆ ಪೋಸ್ ಕೊಡುತ್ತಿದ್ದಾರೆ. ಆದುದರಿಂದ ಮುಂದೆ ಯಾವುದೇ ಜನಪ್ರತಿನಿಧಿಗಳು ಮರವಂತೆ ಕಡಲ್ಕೊರೆತ ಪ್ರದೇಶಗಳಿಗೆ ಬಂದರೆ ನಾವು ಯಾರು ಹೋಗುವುದಿಲ್ಲ ಎಂದು ಮೀನುಗಾರರು ಆಕ್ರೋಶದಿಂದ ನುಡಿದರು.

ವಾರದೊಳಗೆ ಪರಿಹಾರದ ಭರವಸೆ

ಚಂಡಮಾರುತದಿಂದ ಮರವಂತೆಯಲ್ಲಿ ಹಾನಿಗೀಡಾದ ಕಡಲ ತೀರದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂಡಮಾರುತದಿಂದ ಮರವಂತೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಈ ಸಂಬಂಧ ಒಂದು ವಾರದ ಒಳಗೆ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕುಂದಾಪುರ ಉಪವಿಭಾಗಧಿಕಾರಿ ಕೆ.ರಾಜು, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮಿ, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ಜಿಪಂ ಸದಸ್ಯ ಶಂಕರ್ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News