ಪಾದೂರು ಐಎಸ್‌ಪಿಆರ್‌ಎಲ್ ಯೋಜನೆ ಖಾಸಗೀಕರಣ; ಕಾಂಗ್ರೆಸ್‌ನಿಂದ ಜನಾಂದೋಲನ ಯಾತ್ರೆಗೆ ಸಿದ್ಧತೆ: ಸೊರಕೆ

Update: 2021-05-18 14:30 GMT

ಕಾಪು, ಮೇ 18: ದೇಶದ ಆತಂಕರಿಕ ಭದ್ರತೆ, ರಕ್ಷಣೆ ಮತ್ತು ಆಪತ್ ಕಾಲದ ವಿಪತ್ತಿನ ಸಂದರ್ಭದಲ್ಲಿ ಬಳಕೆಗೆ ಬೇಕಾಗುವ ಕಚ್ಚಾತೈಲ ಸಂಗ್ರಹಣೆಗಾಗಿ ಕೇಂದ್ರ ರಕ್ಷಣಾ ಇಲಾಖೆಯ ಮೂಲಕ ಪಾದೂರಿನ ಕಚ್ಛಾ ತೈಲ ಸಂಗ್ರಹಣಾ ಘಟಕ ವನ್ನು ಅನುಷ್ಟಾನಕ್ಕೆ ತರಲಾಗಿದ್ದು, ಅದನ್ನೀಗ ರಕ್ಷಣಾ ಇಲಾಖೆಯಿಂದ ಪ್ರತ್ಯೇಕಿಸಿ, ಪೆಟ್ರೋಲಿಯಂ ಇಲಾಖೆಗೆ ವಹಿಸಲಾಗಿದೆ. ಅಲ್ಲಿಂದ ಮತ್ತೆ ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಮಂಗಳವಾರ ಕಾಪು ರಾಜೀವ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದೂರು ಐಎಸ್‌ಪಿಆರ್‌ಎಲ್ ಯೋಜನಾ ಸ್ಥಾವರ ವನ್ನು ಜನರ ಭಾವನೆಗಳಿಗೆ ವಿರುದ್ಧವಾಗಿ ಖಾಸಗೀಕರಣಗೊಳಿಸಿದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಿರ್ವದಿಂದ ಮಜೂರುವರೆಗೆ ಬೃಹತ್ ಜನಾಂದೋಲನ ಯಾತ್ರೆ ನಡೆಸಲಾಗುುದು ಎಂದು ಅವರು ಎಚ್ಚರಿಸಿದರು.

ಮಜೂರು, ಪಾದೂರು ಮತ್ತು ಹೇರೂರು ಗ್ರಾಮಗಳ ಜನರು ತಮ್ಮ ನೂರಾರು ಎಕರೆ ಕೃಷಿ ಭೂಮಿಯನ್ನು ದೇಶದ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಯೋಜನೆಯೆಂಬ ನೆಲೆಯಲ್ಲಿ ತ್ಯಾಗ ಮನೋಭಾವದಿಂದ ಕಡಿಮೆ ಮೌಲ್ಯಕ್ಕೆ ಭೂಮಿಯನ್ನು ಒದಗಿಸಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಐಎಸ್‌ಪಿಆರ್‌ಎಲ್ ಯೋಜನೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಮೂಲಕ ಸ್ಥಳೀಯರ ತ್ಯಾಗ ಮನೋಭಾವಕ್ಕೆ ಪೆಟ್ಟು ನೀಡಲು ಹೊರಟಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಜನಪ್ರತಿನಿಗಳು ಮತ್ತು ಜಿಲ್ಲಾಡಳಿತ ಇಲ್ಲಿನ ಜನರ ಭಾವನೆಗಳೊಂದಿಗೆ ಆಟವಾಡಲು ಹೊರಟಿವೆ ಎಂದವರು ಆರೋಪಿಸಿದರು.

ಪ್ರಥಮ ಹಂತದ ಭೂಸ್ವಾದೀನ ಪ್ರಕ್ರಿಯೆ ವೇಳೆ ಕನಿಷ್ಟ ವೌಲ್ಯದ ಪರಿಹಾರ ವನ್ನು ನೀಡಿದ್ದರೂ ಜನರು ಅದನ್ನು ವಿರೋಧಿಸದೇ ಯೋಜನೆಯನ್ನು ಬೆಂಬಲಿಸಿದ್ದರು. ಸ್ಥಳೀಯ ಜನರ ಉದಾರ ಮನೋಭಾವವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ದುರ್ಬಳಕೆ ಮಾಡಿಕೊಂಡಿವೆ. ಇದನ್ನು ಖಂಡಿಸಿ ಪ್ರತಿಭಟನೆ ರೂಪದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಅವರು ನುಡಿದರು.

ತೈಲ ಸೋರಿಕೆಯಿಂದ ಕೃಷಿ ಭೂಮಿ ನಾಶ: ಐಎಸ್‌ಪಿಆರ್‌ಎಲ್ ಘಟಕದ ಪ್ರಥಮ ಹಂತದ ಯೋಜನೆಯ ವೇಳೆ ಸ್ಥಳೀಯರು ಸಾಕಷ್ಟು ತೊಂದರೆ ಗಳನ್ನು ಅನುಭವಿಸಿದ್ದರು. ಯೋಜನಾ ಸ್ಥಾವರದೊಳಗೆ ಪರಿಣತ ತಾಂತ್ರಿಕ ಸಿಬಂದಿಗಳ ಕೊರತೆಯಿಂದ ಸಮರ್ಪಕ ನಿರ್ವಹಣೆ ಯಾಗದೇ ಅವಘಡದ ಭೀತಿಯೂ ಎದುರಾಗುತ್ತಿದೆ. ಭೂಮಿಯೊಳಗೆ ತೈಲ ಸೋರಿಕೆಯಾಗಿ ಭೂಮಿಯ ಫಲವತ್ತತೆ ನಾಶವಾಗುವ ಭೀತಿಯಿದೆ. ಮುಂದೆ ಖಾಸಗಿಯವರು ವಹಿಸಿಕೊಂಡಲ್ಲಿ ಅವರಲ್ಲಿಯೂ ಪರಿಣತರ ಕೊರತೆಯಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಭಣ ಗೊಳ್ಳುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

ಇದೀಗ ಎರಡನೇ ಹಂತದ ಯೋಜನೆಗಾಗಿ ಭೂಸ್ವಾದೀನ ಪ್ರಕ್ರಿಯೆ ನಡೆಯುತ್ತಿದೆ. ದೇಶದಲ್ಲಿ ಜಾರಿಯಲ್ಲಿರುವ ನೂತನ ಭೂಸ್ವಾಧೀನ ನೀತಿ ಯನ್ನು ಗಾಳಿಗೆ ತೂರಿ, ಜನ ವಸತಿ ಪ್ರದೇಶದಲ್ಲಿ ಭೂಸ್ವಾಧೀನ ನಡೆಸಲಾಗುತ್ತಿದೆ. ಶಿರ್ವ ಹಾಗೂ ಕಾಪುವಿನಲ್ಲಿರುವ ಭೂಮಿ ಮೌಲ್ಯಕ್ಕಿಂತ ಕಡಿಮೆ ವೌಲ್ಯ ನೀಡಿ ಭೂಸ್ವಾಧೀನ ನಡೆಯುತ್ತಿದೆ. ಎರಡನೇ ಹಂತದ ಯೋಜನೆಯ ಭೂಸ್ವಾದೀನ ಪ್ರಕ್ರಿಯೆ ವೇಳೆ ಮೂರು ಪಟ್ಟು ಹೆಚ್ಚಳ ವೌಲ್ಯವನ್ನು ನೀಡುವಂತೆ ಹಾಗೂ ಸಿಎಸ್‌ಆರ್ ನಿಯಮ ಬಳಕೆ, ಸ್ಥಳೀಯರಿಗೆ ಉದ್ಯೋಗದ ಅವಕಾಶಗಳನ್ನು ನೀಡುವಂತೆ ಒತ್ತಾಯಿ ಸಲಾಗುವುದು ಎಂದರು.

ಪ್ರಥಮ ಹಂತದ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಉತ್ತಮ ಭೂವೌಲ್ಯ, ಪಾದೂರು-ತೋಕೂರು ನಡುವಿನ ಪೈಪ್‌ಲೈನ್ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ, ಹೈಟೆನ್ಶನ್ ವಿದ್ಯುತ್ ಮಾರ್ಗ ಹಾದು ಹೋದ ಪ್ರದೇಶದಲ್ಲಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಿಕೆ, ಪೈಪ್‌ಲೈನ್ ಕಾಮಗಾರಿ ವೇಳೆ ಬಂಡೆ ಸ್ಪೋಟದಿಂದಾಗಿ ಅಪಾಯಕ್ಕೊಳಗಾದ ಮನೆಗಳಿಗೆ ಗರಿಷ್ಠ ಪರಿಹಾರ ಧನ ಒದಗಿಸುವ ಬಗ್ಗೆ ಜನಜಾಗೃತಿ ಸಮಿತಿ ನಡೆಸಿರುವ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಪೂರ್ಣ ಬೆಂಬಲ ನೀಡಿತ್ತು. ಮುಂದೆಯೂ ಸಮಿತಿ ನಡೆಸುವ ಹೋರಾಟಕ್ಕೆ ಅದೇ ಮಾದರಿಯ ಬೆಂಬಲ ನೀಡಲು ಕಾಂಗ್ರೆಸ್ ಪಕ್ಷ ಬದ್ಧವಿದೆ ಎಂದರು.

ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾದಿಕ್ ದೀನಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸಂಶುದ್ದೀನ್ ಶೇಖ್, ಕಾಪು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಹರೀಶ್ ನಾಯಕ್, ಕಾಪು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಸುವರ್ಣ, ಮಜೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News