ಉಡುಪಿ: ಕೋವಿಡ್‌ಗೆ 4 ಬಲಿ; 737 ಮಂದಿಗೆ ಕೊರೋನ ಸೋಂಕು

Update: 2021-05-18 14:43 GMT

ಉಡುಪಿ, ಮೇ 18: ಕೊರೋನ ಸೋಂಕು ಮಂಗಳವಾರ 32 ವರ್ಷದ ಯುವಕ ಹಾಗೂ 45 ವರ್ಷದ ಯುವತಿ ಸೇರಿದಂತೆ ನಾಲ್ವರನ್ನು ಬಲಿ ಪಡೆದಿದೆ. ಜಿಲ್ಲೆಯಲ್ಲೀಗ ಕೊರೋನ ಸಾಂಕ್ರಾಮಿಕಕ್ಕೆ ಮೃತಪಟ್ಟವರ ಸಂಖ್ಯೆ 275ಕ್ಕೇರಿದೆ. ದಿನದಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 737ಕ್ಕೆ ಇಳಿದಿದೆ. ಅಲ್ಲದೇ ಇಂದು 1095 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 6498 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಮಂಗಳವಾರ ಮೃತರಲ್ಲಿ ಉಡುಪಿ ತಾಲೂಕಿನ ಇಬ್ಬರು ಪುರುಷರು (69, 32) ಹಾಗೂ ಕುಂದಾಪುರ ತಾಲೂಕಿನ ಇಬ್ಬರು ಮಹಿಳೆಯರು (67, 45) ಸೇರಿದ್ದಾರೆ. ಹರಿಖಂಡಿಗೆಯ ಯುವಕ ಕಿಡ್ನಿ ವೈಫಲ್ಯ ಹಾಗೂ ಉಸಿರಾಟದ ತೊಂದರೆಗಾಗಿ ಮೇ 14ಕ್ಕೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆ ಮೃತಪಟ್ಟರು. ನಾಗೂರಿನ ಯುವತಿ ನ್ಯುಮೋನಿಯಾ, ಉಸಿರಾಟದ ತೊಂದರೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

69 ವರ್ಷ ಪ್ರಾಯದ ಕಿದಿಯೂರಿನ ವೃದ್ಧರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ ಸಾವನ್ನಪ್ಪಿದರೆ, ನಾವುಂದದ ಮಹಿಳೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇಬ್ಬರಲ್ಲೂ ಕೋವಿಡ್‌ನ ತೀವ್ರ ಗುಣಲಕ್ಷಣವಿದ್ದು ಉಸಿರಾಟದ ತೊಂದರೆಯನ್ನು ಹೊಂದಿದ್ದರು.

ಮಂಗಳವಾರ ಪಾಸಿಟಿವ್ ಬಂದ 737 ಮಂದಿಯಲ್ಲಿ 384 ಮಂದಿ ಪುರುಷ ರು ಹಾಗೂ 353 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 380, ಕುಂದಾಪುರ ತಾಲೂಕಿನ 294 ಹಾಗೂ ಕಾರ್ಕಳ ತಾಲೂಕಿನ 59 ಮಂದಿ ಇದ್ದು, ಉಳಿದ ನಾಲ್ವರು ಹೊರಜಿಲ್ಲೆಗಳಿಂದ ಜಿಲ್ಲೆಗೆ ವಿವಿಧ ಕಾರಣಗಳಿಗಾಗಿ ಆಗಮಿಸಿದವರು. ಇವರಲ್ಲಿ 43 ಮಂದಿ ಕೋವಿಡ್ ಆಸ್ಪತ್ರೆಗೆ 694 ಮಂದಿ ಹೋಮ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.

ಸೋಮವಾರ 1095 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 41,600 ಕ್ಕೇರಿದೆ. ನಿನ್ನೆ ಜಿಲ್ಲೆಯ 2825 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 737 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 48,373 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,52,152 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಜಿಲ್ಲೆಯ ಯಾವುದೇ ಆಸ್ಪತ್ರೆಗಳಿಂದ ಕಪ್ಫು ಶಿಲೀಂದ್ರ ಸೋಂಕಿನ ಪ್ರಕರಣ ವರದಿಯಾಗಿಲ್ಲ ಎಂದು ಅವರು ಹೇಳಿದರು.

128 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 128 ಮಂದಿ ಕೋವಿಡ್‌ಗಿರುವ ಲಸಿಕೆಯ ಎರಡನೇ ಡೋಸ್‌ನ್ನು ಪಡೆದಿದ್ದಾರೆ. ಇವರಲ್ಲಿ 119 ಮಂದಿ 45 ವರ್ಷ ಮೇಲಿನವರಾದರೆ, ಉಳಿದ 9 ಮಂದಿ ಆರೋಗ್ಯ ಕಾರ್ಯಕರ್ತರು ಎಂದು ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News