×
Ad

ಸೌರಾಷ್ಟ್ರ ವಲಯದಲ್ಲಿ ತೌಕ್ತೆ ಚಂಡಮಾರುತದ ಹಾವಳಿ: ಮೂವರು ಸಾವು, 16,500 ಮನೆಗಳಿಗೆ ಹಾನಿ

Update: 2021-05-18 22:31 IST

ಅಹ್ಮದಾಬಾದ್, ಮೇ 18: ತೌಕ್ತೆ ಚಂಡಮಾರುತದ ಹಾವಳಿಯಿಂದಾಗಿ ಸೌರಾಷ್ಟ್ರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 2,500 ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. 16,500 ಮನೆ/ಗುಡಿಸಲುಗಳಿಗೆ ಹಾನಿಯಾಗಿದೆ, 40,000ಕ್ಕೂ ಅಧಿಕ ಮರಗಳು ಧರೆಗುಳಿವೆ ಹಾಗೂ 196 ರಸ್ತೆಗಳಿಗೆ ಹಾನಿ ಉಂಟಾಗಿದೆ. ಅಲ್ಲದೆ ಹಲವು ನದಿಗಳು ಸೋಮವಾರದಿಂದ ಉಕ್ಕಿ ಹರಿಯುತ್ತಿವೆ.

ಮುಖ್ಯಮಂತ್ರಿ ವಿಜಯ ರೂಪಾನಿ ಅವರು ಗಾಂಧಿನಗರದಲ್ಲಿರುವ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ)ದಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಚಂಡಮಾರುತದಿಂದ ಉಂಟಾದ ಹಾನಿ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಾಪಿ, ರಾಜಕೋಟ್ ಹಾಗೂ ಗರಿಯಧರ್‌ನಲ್ಲಿ ಇದುವರೆಗೆ ಮೂರು ಸಾವು ಸಂಭವಿಸಿರುವುದು ವರದಿಯಾಗಿದೆ ಎಂದು ತಿಳಿಸಿದ್ದಾರೆ. ‘‘ಇದುವರೆಗೆ ಅಧಿಕೃತವಾಗಿ ಮೂರು ಸಾವು ಸಂಭವಿಸಿರುವುದು ವರದಿಯಾಗಿದೆ. ವಾಪಿ (ವಲ್ಸದ ಜಿಲ್ಲೆ)ಯಲ್ಲಿ ಓರ್ವರು ಮೃತಪಟ್ಟಿದ್ದಾರೆ. ರಾಜಕೋಟ್ ಜಿಲ್ಲೆಯಲ್ಲಿ ಮನೆ ಕುಸಿದು ಬಾಲಕನೋರ್ವ ಮೃತಪಟ್ಟಿದ್ದಾನೆ. ಭಾವನಗರದ ಗರಿಯಾಧರ್‌ನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ 80 ವರ್ಷದ ಮಹಿಳೆಯೋರ್ವರು ಮೃತಪಟ್ಟಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ಸುಮಾರು 2,500 ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿರುವುದು ವರದಿಯಾಗಿದೆ. ಇದರಲ್ಲಿ 484 ಸಂಪರ್ಕಗಳನ್ನು ಮರು ಸ್ಥಾಪಿಸಲಾಗಿದೆ ಎಂದು ರೂಪಾನಿ ತಿಳಿಸಿದ್ದಾರೆ. ಚಂಡಮಾರುತ ಕೋವಿಡ್‌ಗೆ ನಿಯೋಜಿತ ಆಸ್ಪತ್ರೆಗಳ ಕಾರ್ಯಚರಣೆಗ ಪ್ರಮುಖ ಬೆದರಿಕೆ ಒಡ್ಡಿದೆ. ಆದರೆ, ಇಂತಹ ಸುಮಾರು 1400 ಆಸ್ಪತ್ರೆಗಳಲ್ಲಿ ಕೇವಲ 16 ಆಸ್ಪತ್ರೆಗಳಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಲ್ಲಿ ನಾಲ್ಕು ಆಸ್ಪತ್ರೆಗಳಲ್ಲಿ ವಿದ್ಯುತ್ ಪೂರೈಕೆ ಮರು ಸ್ಥಾಪಿಸಲಾಗಿದೆ. ಇತರ ನಾಲ್ಕು ಆಸ್ಪತ್ರೆಗಳಲ್ಲಿ ಡೀಸೆಲ್ ಜನರೇಟರ್‌ಗಳಿಂದ ಕಾರ್ಯಾಚರಿಸಲಾಗುತ್ತಿದೆ. ನಾವು 1400 ಆಸ್ಪತ್ರೆಗಳಲ್ಲೂ ಡೀಸೆಲ್ ಜನರೇಟರ್‌ಗಳನ್ನು ಅಳವಡಿಸಿದ್ದೇವೆ ಎಂದು ರೂಪಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News