"ಆದರೆ ನಿಮ್ಮ ಬಾಸ್ ಕೇಳಿಸಿಕೊಳ್ಳುತ್ತಿದ್ದಾರೆಯೇ?": ಲಸಿಕೆ ಉತ್ಪಾದನೆ ಕುರಿತ ಗಡ್ಕರಿ ಸಲಹೆಗೆ ಜೈರಾಂ ರಮೇಶ್ ಉತ್ತರ

Update: 2021-05-19 12:53 GMT

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಲಸಿಕೆಗಳನ್ನು ತಯಾರಿಸಲು  ಹೆಚ್ಚು ಫಾರ್ಮಾ ಕಂಪೆನಿಗಳಿಗೆ ಅನುಮತಿ ನೀಡಬೇಕೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ ಮರುದಿನ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ಆದರೆ ಅವರ ಬಾಸ್ ಈ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆಯೇ? ಇದೇ ಸಲಹೆಯನ್ನು ಡಾ ಮನಮೋಹನ್ ಸಿಂಗ್ ಎಪ್ರಿಲ್ 18ರಂದು ನೀಡಿದ್ದರು,'' ಎಂದು ಟ್ವೀಟ್ ಮಾಡಿದ್ದಾರೆ.

 ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ  ಕೋವಿಡ್ ನಿರ್ವಹಣೆ ಕುರಿತು ಕೆಲವೊಂದು ಸಲಹೆಗಳನ್ನು ನೀಡಿ ಪತ್ರ ಬರೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಮಂಗಳವಾರ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ವರ್ಚುವಲ್ ಸಭೆಯಲ್ಲಿ ಗಡ್ಕರಿ ಮಾತನಾಡಿದ್ದರು. ``ಕೋವಿಡ್ ಲಸಿಕೆಗೆ ಬೇಡಿಕೆ ಅದರ ಪೂರೈಕೆಗಿಂತ ಕಡಿಮೆಯಿದ್ದರೆ ಅದು ಸಮಸ್ಯೆ ಸೃಷ್ಟಿಸುತ್ತದೆ. ಆದುದರಿಂದ ಒಂದು ಕಂಪೆನಿ ಬದಲು, 10 ಕಂಪೆನಿಗಳಿಗೆ ಲಸಿಕೆ ತಯಾರಿಸಲು ಲೈಸನ್ಸ್  ನೀಡಬೇಕು. ಅವರು ಮೊದಲು ದೇಶಕ್ಕೆ ಲಸಿಕೆ ಪೂರೈಸಲಿ, ನಂತರವೂ ಉಳಿದಿದ್ದರೆ ಕಂಪೆನಿಗಳು ಲಸಿಕೆ ರಫ್ತುಗೊಳಿಸಬಹುದು,''ಎಂದು ಸಭೆಯಲ್ಲಿ ಗಡ್ಕರಿ ಹೇಳಿದ್ದರು.

ಈ ಹಿಂದೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಪ್ರಧಾನಿಗೆ ಪತ್ರ ಬರೆದು ಕೋವಿಡ್ ಲಸಿಕೆಯ ಫಾರ್ಮುಲಾವನ್ನು ಇತರ ಉತ್ಪಾದಕರ ಜತೆ ಶೇರ್ ಮಾಡಿ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News