ಹೊಸ ಸೋಂಕು ಪ್ರಕರಣ ಇಳಿಮುಖವಾದರೂ ಅಗ್ರಸ್ಥಾನದಲ್ಲೇ ಮುಂದುವರಿದ ಭಾರತ: ವಿಶ್ವ ಆರೋಗ್ಯ ಸಂಸ್ಥೆ

Update: 2021-05-19 17:51 GMT

ಹೊಸದಿಲ್ಲಿ, ಮೇ 19: ಭಾರತದಲ್ಲಿ ಕಳೆದ ವಾರ ದೈನಂದಿನ ಕೊರೋನ  ಸೋಂಕು ಪ್ರಕರಣದಲ್ಲಿ 13% ಇಳಿಕೆಯಾಗಿದೆ. ಆದರೆ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಇದು ಅತ್ಯಧಿಕವಾಗಿಯೇ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.

ಜಾಗತಿಕವಾಗಿ ಕಳೆದ ವಾರ ಹೊಸ ಸೋಂಕಿನ ಪ್ರಕರಣ 12%ದಷ್ಟು ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಸುಮಾರು 4.8 ಮಿಲಿಯನ್ನಷ್ಟು ಹೊಸ ಸೋಂಕು ಪ್ರಕರಣ, ಸುಮಾರು 86,000 ಹೊಸ ಸಾವಿನ ಪ್ರಕರಣ ವರದಿಯಾಗಿದೆ ಎಂದು ವಿಶ್ವ ಆರೋಗ್ಯಸಂಸ್ಥೆಯ ವಾರಾಂತ್ಯದ ಸೋಂಕಿನ ಅಂಕಿಅಂಶ ಪರಿಷ್ಕರಣೆಯ ವರದಿ ತಿಳಿಸಿದೆ.

ವಿಶ್ವಮಟ್ಟದಲ್ಲಿ ಅತ್ಯಧಿಕ ಸೋಂಕಿನ ಪ್ರಕರಣ(ಕಳೆದ ವಾರ) ಭಾರತದಲ್ಲಿ ದಾಖಲಾಗಿದೆ(2,387,663 ಹೊಸ ಪ್ರಕರಣ). ಇದು ಕಳೆದ ವಾರಕ್ಕೆ ಹೋಲಿಸಿದರೆ 13% ಕಡಿಮೆಯಾಗಿದೆ. ಬ್ರೆಝಿಲ್ (437,076 ಹೊಸ ಪ್ರಕರಣ, 3% ಏರಿಕೆ), ಅಮೆರಿಕ(235,638 ಹೊಸ ಪ್ರಕರಣ, 21% ಇಳಿಕೆ), ಅರ್ಜೆಂಟೀನಾ(151,332 ಹೊಸ ಪ್ರಕರಣ, 8% ಹೆಚ್ಚಳ), ಕೊಲಂಬಿಯಾ(115,834 ಹೊಸ ಪ್ರಕರಣ, 6% ಏರಿಕೆ) ಆ ಬಳಿಕದ ಸ್ಥಾನದಲ್ಲಿವೆ.

ಇದೇ ಅವಧಿಯಲ್ಲಿ ಅತ್ಯಧಿಕ ಸಾವು ಭಾರತದಲ್ಲಿ ಸಂಭವಿಸಿದೆ(27,992 ಹೊಸ ಸಾವಿನ ಪ್ರಕರಣ, 4% ಏರಿಕೆ). ನೇಪಾಳ(1,224 ಹೊಸ ಸಾವಿನ ಪ್ರಕರಣ, 2.667% ಏರಿಕೆ), ಇಂಡೋನೇಶಿಯಾ(1,125 ಹೊಸ ಸಾವಿನ ಪ್ರಕರಣ, 5% ಇಳಿಕೆ) ಆ ಬಳಿಕದ ಸ್ಥಾನದಲ್ಲಿವೆ.

ಭಾರತದ ಒಟ್ಟು ಸೋಂಕಿತರ ಸಂಖ್ಯೆ 24.68 ಮಿಲಿಯ ಮತ್ತು ಮೃತರಾದವರ ಒಟ್ಟು ಪ್ರಮಾಣ ಸುಮಾರು 2,70,284 ಆಗಿದೆ. ಆಗ್ನೇಯ ಏಶ್ಯಾ ವಲಯದಲ್ಲಿ ಕಳೆದ ವಾರ 2.5 ಮಿಲಿಯನ್ ಹೊಸ ಪ್ರಕರಣ, 30,000ಕ್ಕೂ ಅಧಿಕ ಸಾವಿನ ಪ್ರಕರಣ ಸಂಭವಿಸಿದ್ದು ಇದು ಈಹಿಂದಿನ  ವಾರಕ್ಕೆ ಹೋಲಿಸಿದರೆ ಕ್ರಮವಾಗಿ 12% ಮತ್ತು 7% ಏರಿಕೆಯಾಗಿದೆ. ಸತತ 9 ವಾರಗಳ ಏರಿಕೆಯ ಬಳಿಕ ಹೊಸ ಪ್ರಕರಣಗಳ ಪ್ರಮಾಣ ಇಳಿಕೆಯಾಗಿದೆ. ಆದರೆ ಸಾವಿನ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಈ ವಾರ, ಪಶ್ಚಿಮ ಪೆಸಿಫಿಕ್ ವಲಯ ಹೊರತುಪಡಿಸಿ ಉಳಿದೆಲ್ಲಾ ಸೋಂಕಿನ ಪ್ರಕರಣ ಇಳಿಮುಖವಾಗಿದೆ. ಆದರೆ ಹೊಸ ಸೋಂಕಿನ ವ್ಯಾಪಕತೆಯ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಯುರೋಪಿಯನ್ ವಲಯದಲ್ಲಿ ಅತ್ಯಧಿಕ ಇಳಿಕೆ ದಾಖಲಾಗಿದ್ದರೆ, ಆ ಬಳಿಕ ಪೂರ್ವ ಮೆಡಿಟರೇನಿಯನ್ ವಲಯವಿದೆ . ಈ ವಲಯದಲ್ಲಿ ಕಳೆದ ವಾರ ಹೊಸ ಸಾವಿನ ಪ್ರಕರಣದಲ್ಲೂ ಇಳಿಮುಖ ಕಂಡುಬಂದಿದೆ.

ಕಳೆದ ವರ್ಷದ ಆಗಸ್ಟ್ 7ಕ್ಕೆ ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣ 20 ಲಕ್ಷದ ಗಡಿ ದಾಟಿದ್ದರೆ, ಸೆಪ್ಟಂಬರ್ 16ರಂದು 50 ಲಕ್ಷದ ಗಡಿ ದಾಟಿತ್ತು.  ಡಿಸೆಂಬರ್ 10ರಂದು 1 ಕೋಟಿ, ಮೇ 4ರಂದು 2 ಕೋಟಿ ಗಡಿ ದಾಟಿದೆ. ಭಾರತದಲ್ಲಿ ಬುಧವಾರ ಬೆಳಗ್ಗಿನವರೆಗಿನ ಅಂಕಿಅಂಶದಂತೆ 2,67,334 ಹೊಸ ಸೋಂಕಿನ ಪ್ರಕರಣ, 4,529 ಹೊಸ ಸಾವಿನ ಪ್ರಕರಣ ದಾಖಲಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿನ ಪ್ರಕರಣ 2,54,96,330ಕ್ಕೆ ಮತ್ತು ಒಟ್ಟು ಸಾವಿನ ಪ್ರಕರಣ 2,83,248ಕ್ಕೇರಿದೆ ಎಂದು ಕೇಂದ್ರ ಸರಕಾರ  ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News