ಕೇಂದ್ರ ಸರಕಾರ, ಭಾರತ್ ಬಯೋಟೆಕ್ ಗೆ ಹೈಕೋರ್ಟ್ ನೋಟಿಸ್

Update: 2021-05-19 18:01 GMT

ಹೊಸದಿಲ್ಲಿ, ಮೇ 19: 2ರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ 2 ಮತ್ತು 3ನೇ ಹಂತದ ಪರೀಕ್ಷೆಯನ್ನು ನಡೆಸಲು ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ದಿಲ್ಲಿ ಹೈಕೋರ್ಟ್ ಬುಧವಾರ ಕೇಂದ್ರ ಸರಕಾರ ಹಾಗೂ ಭಾರತ್ ಬಯೊಟೆಕ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದೆ.

ಆದರೆ, ಅರ್ಜಿಗೆ ಸಂಬಂಧಿಸಿ ಯಾವುದೇ ಮಧ್ಯಂತರ ಆದೇಶ ಜಾರಿಗೊಳಿಸಲು ನಿರಾಕರಿಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಗೊಳಿಸಿದೆ.

ದೇಶದಲ್ಲಿ ಕೊರೋನ ಸೋಂಕಿನ ವಿರುದ್ಧದ ಲಸಿಕೀಕರಣ ಅಭಿಯಾನದಲ್ಲಿ ಭಾರತ್ ಬಯೊಟೆಕ್ ಅಭಿವೃದ್ಧಿಗೊಳಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು 18 ವರ್ಷ ಮೀರಿದ ವಯಸ್ಕರಿಗೆ ಬಳಸಲಾಗುತ್ತಿದೆ. ಈ ಲಸಿಕೆಯನ್ನು 2ರಿಂದ 18 ವರ್ಷದ ಮಕ್ಕಳಿಗೆ ಪರೀಕ್ಷಾ ಪ್ರಯೋಗವಾಗಿ ಬಳಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ನ್ಯಾಯವಾದಿ ಸಂಜೀವ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಪರೀಕ್ಷಾ ಪ್ರಯೋಗಕ್ಕೆ ಒಳಗಾಗುವವರ ಸಮ್ಮತಿಯನ್ನು ಕೇಳಲಾಗುತ್ತದೆ. ಅಲ್ಲದೆ ಈ ಕುರಿತ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ 2ರಿಂದ 8 ವರ್ಷದ  ವಯಸ್ಸಿನವರು ಇರುವುದರಿಂದ ಕಾನೂನು ಪ್ರಕಾರ ಯಾವುದೇ ಒಪ್ಪಂದಕ್ಕೆ, ದಾಖಲೆಗೆ ಅವರು ಸಹಿ ಹಾಕುವಂತಿಲ್ಲ. ಆದ್ದರಿಂದ ಈ ಅನುಮತಿ ಸರಿಯಲ್ಲ . ಪರೀಕ್ಷಾ ಪ್ರಯೋಗಕ್ಕೆ ಒಳಗಾಗುವ ಅಪ್ರಾಪ್ತ ವಯಸ್ಕರ ಪೋಷಕರ ಅನುಮತಿ ಪಡೆಯುವ ಅಗತ್ಯವಿದೆ   ಎಂದವರು ಪ್ರತಿಪಾದಿಸಿದ್ದರು.

ಈ ಪ್ರಕರಣದಲ್ಲಿ ಒಂದು ವೇಳೆ ಪೋಷಕರ ಒಪ್ಪಿಗೆ ಪಡೆದಿದ್ದರೂ ಅವರು ಹಣ ಅಥವಾ ಇನ್ನಿತರ ಆಕರ್ಷಣೆಗೆ ಒಳಗಾಗಿ ಅನುಮತಿ ನೀಡಿರಬಹುದು . ಆದ್ದರಿಂದ ಪರೀಕ್ಷಾ ಪ್ರಯೋಗಕ್ಕೆ ಒಳಗಾಗುವ ಎಲ್ಲಾ 525 ಮಕ್ಕಳ ಕರಾರು ಪತ್ರದ ವಿವರ ಒದಗಿಸಬೇಕು ಮತ್ತು ಒಂದು ವೇಳೆ ಪರೀಕ್ಷಾ ಪ್ರಯೋಗದ ಸಂದರ್ಭ ಯಾವುದೇ ಮಕ್ಕಳು ಮೃತಪಟ್ಟರೆ, ಪರೀಕ್ಷೆ ಪ್ರಕ್ರಿಯೆ ನಡೆಸಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News