ಪಶ್ಚಿಮ ಬಂಗಾಳ ರಾಜಭವನದ ಎದುರು ಕುರಿಮಂದೆ ಸಹಿತ ಪ್ರತಿಭಟನೆ

Update: 2021-05-19 18:02 GMT

ಕೋಲ್ಕತಾ, ಮೇ 17: ನಾರದಾ ಲಂಚ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಸಿಬಿಐ ಅಧಿಕಾರಿಗಳು  ಪ.ಬಂಗಾಳ ಸರಕಾರದ ಸಚಿವರನ್ನು ಬಂಧಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಈ ಮಧ್ಯೆ ಮಂಗಳವಾರ ಪ್ರತಿಭಟನಾಕಾರರ ತಂಡವೊಂದು ಕುರಿಮಂದೆಯೊಂದಿಗೆ ರಾಜಭವನದ ಎದುರು ಪ್ರತಿಭಟನೆ ನಡೆಸಿರುವ ಬಗ್ಗೆ ರಾಜ್ಯಪಾಲರು ತೀವ್ರ ಅಸಮಾಧಾನ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ನಿಷೇಧಿತ ವಲಯ ರಾಜಭವನದ ಮುಖ್ಯದ್ವಾರದ ಬಳಿಯೇ ಕುರಿಮಂದೆಯೊಂದಿಗೆ ಪ್ರತಿಭಟನೆ ನಡೆಸಿರುವುದು ರಾಜ್ಯದಲ್ಲಿ ಕಾನೂನು ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ನಿದರ್ಶನವಾಗಿದೆ. ಈ ಘಟನೆಯ ಬಗ್ಗೆ  ಸಂಜೆ 5ರೊಳಗೆ ವಿವರಣೆ  ನೀಡಬೇಕು ಎಂದು ರಾಜ್ಯಪಾಲ ಜಗದೀಪ್ ಧನ್ಕರ್ ಕೋಲ್ಕತಾ ನಗರ ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ರಾಜಭವನದ ಮುಖ್ಯದ್ವಾರದ ಬಳಿ ಕಾನೂನು ಸುವ್ಯವಸ್ಥೆಗೆ ಭಂಗ ಬಂದಿರುವುದು  ಮತ್ತು ಈ ಪ್ರಕರಣದಲ್ಲಿ ಪೊಲೀಸರ ವರ್ತನೆ ಆತಂಕದ ವಿಷಯವಾಗಿದೆ . ಕೋಲ್ಕತಾ ಪೊಲೀಸರ ಬೃಹತ್ ಪಡೆಯ ಉಪಸ್ಥಿತಿಯಲ್ಲಿಯೇ ಕೆಲವು ಸಮಾಜಘಾತುಕ ಶಕ್ತಿಗಳು ರಾಜಭವನದ ಉತ್ತರಗೇಟಿನ ಎದುರು ಜಮಾಯಿಸಿದ್ದರು ಎಂದು ಟ್ವೀಟ್ ಮಾಡಿ, ಅದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೋಲ್ಕತಾ ಪೊಲೀಸ್ಗೆ ಟ್ಯಾಗ್ ಮಾಡಿದ್ದಾರೆ. 

ಇನ್ನೊಂದು ಘಟನೆ ಇದೇ ಸ್ಥಳದ ಬಳಿ ನಡೆದಿದೆ. ಓರ್ವ ವ್ಯಕ್ತಿ ಸುಮಾರು ಅರ್ಧ ಡಜನ್ ನಷ್ಟು ಕುರಿಗಳೊಂದಿಗೆ ಬಂದು ರಾಜಭವನದ ಉತ್ತರ ಗೇಟ್ ನಲ್ಲಿ ತಡೆಯೊಡ್ಡಿದ್ದಾನೆ. ಬೃಹತ್ ಸಂಖ್ಯೆಯಲ್ಲಿದ್ದ ಪೊಲೀಸರು ಹಾಗೂ ಮಾಧ್ಯಮದವರು ಈ ನಾಟಕವನ್ನು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು. ಈ ವ್ಯಕ್ತಿಯನ್ನು ಅಲ್ಲಿಂದ ತೆರವುಗೊಳಿಸುವ ಅಥವಾ ಆತನನ್ನು ತಪಾಸಣೆಗೊಳಿಸುವ ಯಾವುದೇ ಉಪಕ್ರಮ ನಡೆಯಲಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

ಕೋಲ್ಕತಾ ನಾಗರಿಕ ಮಂಚ್ ಎಂಬ ಸಂಘಟನೆ ಈ ಪ್ರತಿಭಟನೆ ಹಮ್ಮಿಕೊಂಡಿತ್ತು. ತಮಗೆ ಯಾವುದೇ ರಾಜಕೀಯ ಸಂಘಟನೆಯೊಂದಿಗೆ ಸಂಬಂಧವಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News