ಖಾದಿ ಬ್ರಾಂಡ್ ಗೆ ಕೆವಿಐಸಿ ಕಾನೂನುಬದ್ಧ ಮಾಲಕ: ನ್ಯಾಯಮಂಡಳಿ ಆದೇಶ
ಹೊಸದಿಲ್ಲಿ, ಮೇ 20: ಖಾದಿ ಎಂಬುದು ಜಾತಿವಾಚಕ ಪದವಲ್ಲ. ಖಾದಿ ಮತ್ತು ಗ್ರಾಮೋದ್ಯೋ ಆಯೋಗ(ಕೆವಿಐಸಿ)ವು ‘ಖಾದಿ ’ ಬ್ರಾಂಡ್ನ ಕಾನೂನು ಸಮ್ಮತ ಮಾಲಕನಾಗಿದೆ ಎಂದು ಐಎನ್ಡಿಆರ್ಪಿ ನ್ಯಾಯಮಂಡಳಿ ಹೇಳಿದೆ.
ಖಾದಿ ಎಂಬುದು ಒಂದು ವರ್ಗಕ್ಕೆ ಸಂಬಂಧಿಸಿದ ಪದವಾಗಿದ್ದು ಈ ಜನಪ್ರಿಯ ಬ್ರಾಂಡ್ ಹೆಸರನ್ನು ಇತರರು ಬಳಸುವುದರಿಂದ ಕೆವಿಐಸಿಯ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ಗೊಂದಲಕ್ಕೆ ಕಾರಣವಾಗುತ್ತದೆ ಎಂಬ ಖಾಸಗಿ ಸಂಸ್ಥೆಯ ವಾದವನ್ನು "ದಿ ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ ಡೊಮೈನ್ ಡಿಸ್ಪ್ಯೂಟ್ ಪಾಲಿಸಿ ಆರ್ಬಿಟ್ರೇಷನ್ ಟ್ರಿಬ್ಯೂನಲ್’ ತಳ್ಳಿಹಾಕಿದೆ.
ದಿಲ್ಲಿ ಮೂಲದ ಜಿತೇಂದ್ರ ಜೈನ್ ಹಾಗೂ ಅವರ ಸಹವರ್ತಿಗಳು " ಡಬ್ಲ್ಯುಡಬ್ಲ್ಯುಡಬ್ಲ್ಯು. ಖಾದಿ.ಇನ್ ’ ಎಂಬ ವೆಬ್ಸೈಟ್ ನೋಂದಣಿ ಮಾಡಿದ್ದು ಇದು ದುರುದ್ದೇಶದ ಕೃತ್ಯವಾಗಿದೆ. ಈ ಹೆಸರು ಮತ್ತು ಸಂಸ್ಥೆಯ ಸೇವಾ ಗುರುತಿನ ಚಿಹ್ನೆ ಕೆವಿಐಸಿಯ ಸೇವೆಯನ್ನೇ ಹೋಲುತ್ತಿದೆ. ಖಾದಿ ಬ್ರಾಂಡ್ ಕೆವಿಐಸಿಯ ಹಕ್ಕು ಆದ್ದರಿಂದ ಜೈನ್ ಮತ್ತವರ ಸಹವರ್ತಿಗಳು ಖಾದಿ ಹೆಸರನ್ನು ಬಳಸದಂತೆ ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಕೋರಿ ಕೆವಿಐಸಿ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಟ್ರೇಡ್ ಮಾರ್ಕ್ ಕಾಯ್ದೆ 1999’ರ ಸೆಕ್ಷನ್ 17ರ ನಿಬಂಧನೆಯ ಪ್ರಕಾರ ಖಾದಿ ಬ್ರಾಂಡ್ ಹೆಸರನ್ನು ಕೆವಿಐಸಿ ಹೊಂದಿದ್ದು ಅದು ಖಾದಿ ಬ್ರಾಂಡ್ನ ಕಾನೂನುಬದ್ಧ ಮಾಲಕನಾಗಿದೆ. ಆದ್ದರಿಂದ " ಡಬ್ಲ್ಯುಡಬ್ಲ್ಯುಡಬ್ಲ್ಯು. ಖಾದಿ.ಇನ್ ’ ಎಂಬ ವೆಬ್ಸೈಟ್ ಹೆಸರನ್ನು ಕೆವಿಐಸಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ‘ದಿ ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ’ಗೆ ಸೂಚಿಸಿದೆ.