ಒಂದೇ ದಿನ 20.55 ಲಕ್ಷಕ್ಕೂ ಅಧಿಕ ಕೋವಿಡ್ ಪರೀಕ್ಷೆ: ಕೇಂದ್ರ ಆರೋಗ್ಯ ಇಲಾಖೆ
ಹೊಸದಿಲ್ಲಿ, ಮೇ 20: ಗುರುವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ 20.55 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು ಇದು ದೇಶದಲ್ಲಿ ಒಂದೇ ದಿನದ ಅವಧಿಯಲ್ಲಿ ನಡೆಸಿದ ಅತ್ಯಧಿಕ ಪರೀಕ್ಷೆಯಾಗಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆ ಹೇಳಿದೆ. ಈ ಅವಧಿಯಲ್ಲಿ ದೇಶದಾದ್ಯಂತ 20,55,010 ಪರೀಕ್ಷೆ ನಡೆಸಲಾಗಿದೆ.
ಇದೀಗ ದೇಶದಲ್ಲಿ ಪೊಸಿಟಿವ್ ಪ್ರಕರಣಗಳ ಪ್ರಮಾಣ 13.44% ಆಗಿದೆ. ಇದೇ ಅವಧಿಯಲ್ಲಿ 3,69,077 ಸೋಂಕಿತರು ಚೇತರಿಸಿಕೊಂಡಿದ್ದಾರೆ. 2,76,110 ಹೊಸ ಸೋಂಕು ಪ್ರಕರಣ ದಾಖಲಾಗಿದೆ. ಸೋಂಕು ಪ್ರಕರಣಕ್ಕಿಂತ ಚೇತರಿಕೆಯ ಪ್ರಕರಣ ಹೆಚ್ಚಾಗಿದೆ ಎಂದು ಇಲಾಖೆ ಹೇಳಿದೆ. ಸತತ ನಾಲ್ಕನೇ ದಿನ ದೇಶದಲ್ಲಿ ಹೊಸ ಸೋಂಕಿನ ಪ್ರಕರಣ 3 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. 2,76,110 ಹೊಸ ಪ್ರಕರಣಗಳಲ್ಲಿ 77.17%ದಷ್ಟು ಪ್ರಕರಣ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ಪ.ಬಂಗಾಳ, ಒಡಿಶಾ, ರಾಜಸ್ತಾನ, ಉತ್ತರಪ್ರದೇಶ ಮತ್ತು ಹರ್ಯಾನ ರಾಜ್ಯಗಳಲ್ಲಿ ದಾಖಲಾಗಿದೆ. ತಮಿಳುನಾಡಿನಲ್ಲಿ ಅತ್ಯಧಿಕ (34,875) ಹೊಸ ಪ್ರಕರಣ ದಾಖಲಾಗಿದ್ದರೆ ಆ ಬಳಿಕದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 34,281 ಹೊಸ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 31,29,828ಕ್ಕೆ ಇಳಿದಿದ್ದು ಇದು ಒಟ್ಟು ಸೋಂಕಿನ ಪ್ರಮಾಣದ 12.14% ಆಗಿದೆ ಎಂದು ಇಲಾಖೆ ಹೇಳಿದೆ.
ದೇಶದ ಒಟ್ಟು ಸಕ್ರಿಯ ಪ್ರಕರಣಗಳ 6.23%ದಷ್ಟು ಪ್ರಕರಣಗಳು ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ತಾನ, ಪ.ಬಂಗಾಳ ಮತ್ತು ಉತ್ತರಪ್ರದೇಶದಲ್ಲಿ ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಹೊಸದಾಗಿ 3,874 ಸಾವು ಸಂಭವಿಸಿದ್ದು ದೇಶದಲ್ಲಿ ಸೋಂಕಿನ ಮರಣ ಪ್ರಮಾಣ 1.11%ವಿದೆ. ಹೊಸ ಸಾವಿನ ಪ್ರಕರಣದ 72.25%ದಷ್ಟು ಸಾವು 10 ರಾಜ್ಯಗಳಲ್ಲಿ ಸಂಭವಿಸಿದೆ. ಇದರಲ್ಲಿ ಮಹಾರಾಷ್ಟ್ರ 594 ಸಾವು ಪ್ರಕರಣ, ಕರ್ನಾಟಕ 468 ಸಾವಿನ ಪ್ರಕರಣ ಮೊದಲ ಎರಡು ಸ್ಥಾನಗಳಲ್ಲಿವೆ. ದೇಶದಲ್ಲಿ ಇದುವರೆಗೆ ಒಟ್ಟು 18.70 ಡೋಸ್ ಲಸಿಕೆ ನೀಡಲಾಗಿದೆ ಎಂದು ಇಲಾಖೆ ಹೇಳಿದೆ.