ಡಾ.ಕಕ್ಕಿಲ್ಲಾಯ ಮಾಸ್ಕ್ ಪ್ರಕರಣ, ಅವಹೇಳನಕಾರಿ ಆಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ: ಪತ್ರಕರ್ತ ವಿಕ್ಕಿ ನಂಜಪ್ಪ

Update: 2021-05-21 11:03 GMT
ವಿಕ್ಕಿ ನಂಜಪ್ಪ

ಮಂಗಳೂರು, ಮೇ 21: "ಮಂಗಳೂರಿನ ಸೂಪರ್ ಮಾರ್ಕೆಟ್ ವೊಂದರಲ್ಲಿ ನಡೆದ ಮಾಸ್ಕ್ ಪ್ರಕರಣ ಹಾಗೂ ಅದರ ಬೆನ್ನಿಗೆ ವೈರಲ್ ಆಗಿರುವ ಆಡಿಯೋಗು ನನಗೂ ಯಾವುದೇ ಸಂಬಂಧ ಇಲ್ಲ" ಎಂದು ಪತ್ರಕರ್ತ ವಿಕ್ಕಿ ನಂಜಪ್ಪ ಅವರು 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

ನಗರದ ಸೂಪರ್ ಬಝಾರೊಂದರಲ್ಲಿ ಮಂಗಳವಾರ ಖರೀದಿಗೆ ಹೋಗಿದ್ದ ಸಂದರ್ಭ ನಗರದ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾಸ್ಕ್ ಧರಿಸಿರಲಿಲ್ಲ ಎಂಬ ಬಗ್ಗೆ ಅಲ್ಲಿನ ಮಾಲಕರೊಂದಿಗೆ ವಾಗ್ವಾದ ನಡೆದಿತ್ತು. ಅದರ ಮರುದಿನ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಡಾ.ಕಕ್ಕಿಲ್ಲಾಯರ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ. ಈ ನಡುವೆ  ಬುಧವಾರ ರಾತ್ರಿ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂಪರ್ ಮಾರ್ಕೆಟ್ ನ ಮಾಲಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರೆನ್ನಲಾದ ಈ ಆಡಿಯೋದಲ್ಲಿ ಡಾ.ಕಕ್ಕಿಲ್ಲಾಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಹಾಗೂ ಅವರ ವಿರುದ್ಧ ಹಲ್ಲೆಗೆ ಪ್ರಚೋದಿಸಲಾಗಿದೆ.

ಈ ಆಡಿಯೋದಲ್ಲಿ ಮಾತನಾಡಿರುವವರು ಹಿರಿಯ ಪತ್ರಕರ್ತ ವಿಕ್ಕಿ ನಂಜಪ್ಪ ಎಂದು ಗುರುವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ವೈರಲ್ ಆಗಿದೆ. ಈ ಬಗ್ಗೆ ವಿಕ್ಕಿ ನಂಜಪ್ಪರನ್ನು 'ವಾರ್ತಾಭಾರತಿ' ಸಂಪರ್ಕಿಸಿದಾಗ, "ಸೂಪರ್ ಬಝಾರೊಂದರಲ್ಲಿ ಡಾ.ಕಕ್ಕಿಲ್ಲಾಯರ ಮಾಸ್ಕ್ ಪ್ರಕರಣ ನಡೆದಿರುವ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದಿದ್ದು ಬಿಟ್ಟರೆ, ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ವಿಕ್ಕಿ ನಂಜಪ್ಪರಿಗಿಂತ ಮೊದಲು ಈ ವೈರಲ್ ಆಡಿಯೋದಲ್ಲಿರುವ ಧ್ವನಿ ಮಂಗಳೂರಿನ ವಕೀಲ ರಾಜೇಶ್ ಕುಡ್ವ ಅವರದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ವೈರಲ್ ಆಗಿತ್ತು. ಆದರೆ ಇದು ರಾಜೇಶ್ ಕುಡ್ವ ಅವರು ಮಾತನಾಡಿದ್ದಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News