ಗಾಝಾದಲ್ಲಿ ಕದನ ವಿರಾಮ ಘೋಷಣೆ: ಜಯ ನಮ್ಮದೇ ಎಂದ ಹಮಾಸ್, ಫೆಲೆಸ್ತೀನಿಗಳಿಂದ ಸಂಭ್ರಮಾಚರಣೆ
ಗಾಝಾ ಸಿಟಿ,ಮೇ 21: ಗಾಝಾ ಪಟ್ಟಿಯಲ್ಲಿ ಕದನ ವಿರಾಮವನ್ನು ಘೋಷಿಸಲಾಗಿದ್ದು,ಕಳೆದ 11 ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿದ್ದ ಭೀಕರ ಸಂಘರ್ಷಕ್ಕೆ ಕೊನೆಗೂ ಶುಕ್ರವಾರ ನಸುಕಿನಲ್ಲಿ ತೆರೆ ಬಿದ್ದಿದೆ. ಬೆಳ್ಳಂಬೆಳಿಗ್ಗೆಯೇ ಸಾವಿರಾರು ಫೆಲೆಸ್ತೀನಿಯರು ಬೀದಿಗಿಳಿದು ಸಂಭ್ರಮವನ್ನು ಆಚರಿಸಿದರು. ಸಂಘರ್ಷ ಫೆಲೆಸ್ತೀನಿಯರ ಪಾಲಿಗೆ ದುಬಾರಿಯಾಗಿತ್ತಾದರೂ ಇದು ಪ್ರಬಲ ಇಸ್ರೇಲ್ನ ವಿರುದ್ಧ ಹಮಾಸ್ ಗುಂಪಿನ ವಿಜಯವಾಗಿದೆ ಎಂದು ಹೆಚ್ಚಿನವರು ಪರಿಗಣಿಸಿದ್ದಾರೆ.
ಸಂಘರ್ಷದಲ್ಲಿ ಹೆಚ್ಚಿನವರು ಫೆಲೆಸ್ತೀನಿಗಳು ಸೇರಿದಂತೆ 200ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದು,ಮೊದಲೇ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಹಮಾಸ್ ಆಡಳಿತದ ಗಾಝಾ ಪಟ್ಟಿಯಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವುಂಟಾಗಿದೆ. ಇಸ್ರೇಲ್ನಲ್ಲಿ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದ್ದ ಹಮಾಸ್ನಿಂದ ರಾಕೆಟ್ಗಳ ಸುರಿಮಳೆಯು ಸಂಘರ್ಷದ ಭಾವನಾತ್ಮಕ ಕೇಂದ್ರಬಿಂದುವಾಗಿದ್ದ ಜೆರುಸಲೇಮ್ನಲ್ಲಿ ಇಸ್ರೇಲಿಗಳ ದೌರ್ಜನ್ಯಕ್ಕೆ ದಿಟ್ಟ ಉತ್ತರವಾಗಿತ್ತು ಎಂದು ಹೆಚ್ಚಿನ ಫೆಲೆಸ್ತೀನಿಗಳು ಭಾವಿಸಿದ್ದಾರೆ.
ಮುಸ್ಲಿಮರು ಮತ್ತು ಯಹೂದಿಗಳಿಗೆ ಪವಿತ್ರ ತಾಣವಾಗಿರುವ ಜೆರುಸಲೇಮ್ನ ಅಲ್-ಅಕ್ಸಾ ಮಸೀದಿಯಲ್ಲಿ ಶುಕ್ರವಾರ ಬೆಳಗಿನ ಜಾವ ಸಾವಿರಾರು ಫೆಲೆಸ್ತೀನಿಗಳಿಂದ ಪ್ರಾರ್ಥನೆ ಶಾಂತಿಯುತವಾಗಿ ನಡೆದಿದ್ದು,ಕದನ ವಿರಾಮವು ಯಶಸ್ವಿಯಾಗುತ್ತದೆಯೇ ಎಂಬ ಕಳವಳವು ನಿವಾರಣೆಯಾಗಿದೆ.
ನಸುಕಿನ ಎರಡು ಗಂಟೆಗೆ ಕದನ ವಿರಾಮದ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾವಿರಾರು ಫೆಲೆಸ್ತೀನಿಗಳು ಬೀದಿಗಳಿಗೆ ಇಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಫೆಲೆಸ್ತೀನಿಯನ್ ಮತ್ತು ಹಮಾಸ್ ಧ್ವಜಗಳನ್ನು ಬೀಸುತ್ತಿದ್ದ ಯುವಜನರು ಪರಸ್ಪರ ಸಿಹಿಗಳನ್ನು ವಿನಿಮಯಿಸಿಕೊಂಡರು,ವಾಹನಗಳ ಹಾರ್ನ್ಗಳನ್ನು ನಿರಂತರವಾಗಿ ಬಾರಿಸುತ್ತ ಪಟಾಕಿಗಳನ್ನು ಸಿಡಿಸಿದರು. ಪೂರ್ವ ಜೆರುಸಲೇಮ್ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿಯೂ ಸಂಭ್ರಮಾಚರಣೆಗಳು ನಡೆದವು.
ಸಂಘರ್ಷದುದ್ದಕ್ಕೂ ಮುಚ್ಚಿದ್ದ ಗಾಝಾ ಸಿಟಿಯಲ್ಲಿನ ಬಯಲು ಮಾರುಕಟ್ಟೆ ಶುಕ್ರವಾರ ಬೆಳಿಗ್ಗೆ ತೆರೆದುಕೊಂಡು ವ್ಯಾಪಾರಕ್ಕೆ ಸಜ್ಜಾಗಿತ್ತು.
ಬದುಕು ಮರಳುತ್ತದೆ,ಏಕೆಂದರೆ ಇದು ಮೊದಲ ಯುದ್ಧವಲ್ಲ,ಕೊನೆಯ ಯುದ್ಧವೂ ಅಲ್ಲ ಎಂದು ಹೇಳಿದ ಅಂಗಡಿಯೊಂದರ ಮಾಲಿಕ ಅಶ್ರಫ್ ಅಬು ಮುಹಮ್ಮದ್,‘ಹೃದಯದಲ್ಲಿ ನೋವು ತುಂಬಿದೆ. ವಿನಾಶಗಳು ನಡೆದುಹೋಗಿವೆ. ಕುಟುಂಬಗಳು ನಿರ್ನಾಮಗೊಂಡಿವೆ. ಇದು ನಮಗೆ ದುಃಖವನ್ನುಂಟು ಮಾಡಿದೆ. ಆದರೆ ಇದು ಈ ನೆಲದಲ್ಲಿ ನಮ್ಮ ವಿಧಿಯಾಗಿದೆ,ಸಂಯಮದಿಂದ ಬದುಕಬೇಕಿದೆ ’ಎಂದರು.
ಅತ್ತ ಇಸ್ರೇಲ್ನಲ್ಲಿ ಸಂಘರ್ಷವನ್ನು ಬೇಗನೆ ನಿಲ್ಲಿಸಿದ್ದಕ್ಕಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತನ್ನ ಬಲಪಂಥೀಯ ಬೆಂಬಲಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಎರಡು ಬದ್ಧವೈರಿಗಳ ನಡುವಿನ ಹಿಂದಿನ ಮೂರು ಯುದ್ಧಗಳಂತೆ ಈ ಸಂಘರ್ಷವೂ ಅನಿರ್ಣಿತವಾಗಿ ಕೊನೆಗೊಂಡಿದೆ. ನೂರಾರು ವಾಯುದಾಳಿಗಳ ಮೂಲಕ ಹಮಾಸ್ಗೆ ಭಾರೀ ನಷ್ಟವನ್ನುಂಟು ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆಯಾದರೂ ಹಮಾಸ್ನ ರಾಕೆಟ್ಗಳನ್ನು ತಡೆಯಲು ಅದಕ್ಕೆ ಮತ್ತೊಮ್ಮೆ ಸಾಧ್ಯವಾಗಿರಲಿಲ್ಲ.
ಗಾಝಾ ಪಟ್ಟಿಯಲ್ಲಿ ಅಪಾರ ಜೀವ,ಆಸ್ತಿಪಾಸ್ತಿ ಹಾನಿಗಳಾಗಿದ್ದರೂ ಜಯ ತನ್ನದೇ ಆಗಿದೆ ಎಂದು ಹಮಾಸ್ ಹೇಳಿದೆ. ಈಗಾಗಲೇ ತೀವ್ರ ನಿರುದ್ಯೋಗ ಮತ್ತು ಕೊರೋನವೈರಸ್ ಸಾಂಕ್ರಾಮಿಕದಿಂದ ನಲುಗಿರುವ ಗಾಝಾ ಪಟ್ಟಿಯ ಪುನರ್ನಿರ್ಮಾಣದ ಅಗಾಧ ಸವಾಲು ಈಗ ಹಮಾಸ್ ಮುಂದಿದೆ.
ದಾಳಿಗಳನ್ನು ನಿಲ್ಲಿಸುವಂತೆ ಇಸ್ರೇಲ್ನ ಮೇಲೆ ಅಮೆರಿಕದ ಒತ್ತಡದ ಬಳಿಕ ನೆರೆಯ ಈಜಿಪ್ತ್ನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದವೇರ್ಪಟ್ಟಿದೆ. ಈಜಿಪ್ತ್ನ ಪ್ರಸ್ತಾವವನ್ನು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಗುರುವಾರ ತಡರಾತ್ರಿ ಪ್ರಕಟಿಸಿದ ನೆತಾನ್ಯಹು, ಪ್ರದೇಶದಲ್ಲಿಯ ವಾಸ್ತವ ಸ್ಥಿತಿಯು ಕದನ ವಿರಾಮದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಒತ್ತಿ ಹೇಳಿದರು.
ಚೇತರಿಕೆ ಪ್ರಯತ್ನಗಳು ಹಾಗೂ ಇಸ್ರೇಲಿಗಳು ಮತ್ತು ಫೆಲೆಸ್ತೀನಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಜತೆಯಾಗಿ ಶ್ರಮಿಸುವ ಬಗ್ಗೆ ಚರ್ಚಿಸಲು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಅವರು ಸದ್ಯವೇ ಅಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.
ಮೇ 10ರಿಂದ ಭುಗಿಲೆದ್ದಿದ್ದ ಸಂಘರ್ಷದುದ್ದಕ್ಕೂ ಹಮಾಸ್ ಮತ್ತು ಇತರ ಬಂಡುಕೋರ ಗುಂಪುಗಳು ಇಸ್ರೇಲ್ನ ಹಲವಾರು ನಗರಗಳ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು 4,000ಕ್ಕೂ ಅಧಿಕ ರಾಕೆಟ್ಗಳನ್ನು ಉಡಾಯಿಸಿದ್ದು,ಡಝನ್ನಷ್ಟು ರಾಕೆಟ್ಗಳು ವಾಣಿಜ್ಯ ರಾಜಧಾನಿಯಾಗಿದ್ದ ಟೆಲ್ ಅವಿವ್ ಮೇಲೂ ಬಿದ್ದಿದ್ದವು.
ಸಂಘರ್ಷದಲ್ಲಿ 65 ಮಕ್ಕಳು ಮತ್ತು 39 ಮಹಿಳೆಯರು ಸೇರಿದಂತೆ ಕನಿಷ್ಠ 230 ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದು, 1700 ಜನರು ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯವು ತಿಳಿಸಿದೆ. ಇಸ್ರೇಲ್ನಲ್ಲಿ ಐದರ ಹರೆಯದ ಬಾಲಕ ಮತ್ತು 16ರ ಹರೆಯದ ಬಾಲಕಿ ಸೇರಿದಂತೆ 12 ಜನರು ರಾಕೆಟ್ ದಾಳಿಗಳಿಂದ ಮೃತಪಟ್ಟಿದ್ದಾರೆ. ಮೃತರಲ್ಲಿ ಭಾರತದ ಕೇರಳ ಮೂಲದ ಮಹಿಳೆಯೋರ್ವರೂ ಸೇರಿದ್ದಾರೆ.