ಕಾಂಗ್ರೆಸ್ ಮುಖಂಡರೇ, ಸೇವೆಯ ಹೆಸರಲ್ಲಿ ಜನರನ್ನು ವಂಚಿಸುವವರ ಬಲೆಗೆ ಬೀಳಬೇಡಿ

Update: 2021-05-21 17:30 GMT

ಮಾನ್ಯರೇ,

ಗುರುವಾರ ಬೆಂಗಳೂರಿನ ಚಿನ್ನಾಭರಣ ಸಂಸ್ಥೆಯೊಂದು ಕಾಂಗ್ರೆಸ್ ಪಕ್ಷದ ಮೂಲಕ ಕೊರೋನ ಸೋಂಕಿತರ ನೆರವಿಗೆ 25 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ವಿತರಿಸಿದ ಕಾರ್ಯಕ್ರಮವೊಂದನ್ನು ನಡೆಸಿದೆ. ಲಾಕ್‌ಡೌನ್ ಸಂದರ್ಭದಲ್ಲೇ ಆ ಸಂಸ್ಥೆಯ ಸಭಾಂಗಣದಲ್ಲೇ ನಡೆದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ಝಮೀರ್ ಅಹ್ಮದ್ ಖಾನ್, ಎನ್. ಎ. ಹಾರಿಸ್ ಮತ್ತಿತರ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಭಾಗವಹಿಸಿದ್ದಾರೆ. ಐಎಂಎ ಎಂಬ ಹೂಡಿಕೆ ಕಂಪೆನಿ ಹಾಗೂ ಚಿನ್ನಾಭರಣ ಮಳಿಗೆಯೊಂದು ಮುಳುಗಿ ಸಾವಿರಾರು ಜನರ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ನಡೆದು ಹೆಚ್ಚು ಸಮಯ ಕಳೆದಿಲ್ಲ. ಬಡ, ಕೆಳ ಮಧ್ಯಮ ಹಾಗೂ ಮಧ್ಯಮ ವರ್ಗದ ಸಾವಿರಾರು ಜನರು ಸಾವಿರಾರು ಕೋಟಿ ರೂ.ಯನ್ನು ಆ ಹಗರಣದಲ್ಲಿ ಕಳಕೊಂಡಿದ್ದಾರೆ. ಆ ಹಗರಣದ ಪ್ರಧಾನ ಆರೋಪಿ ಜೊತೆ ಕಾಂಗ್ರೆಸ್‌ನ ಕೆಲವು ಮುಖಂಡರು ಸಂಪರ್ಕದಲ್ಲಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು. ಈಗ ಮತ್ತೆ ಕಾಂಗ್ರೆಸ್‌ನ ಎಲ್ಲ ಘಟಾನುಘಟಿ ನಾಯಕರು ಇನ್ನೊಂದು ಚಿನ್ನಾಭರಣ ವ್ಯಾಪಾರದ ಹೆಸರಲ್ಲಿ ನಡೆಯುವ ಸಂಸ್ಥೆ ಹಾಗೂ ಅದರ ಮಾಲಕನ ಪಕ್ಕದಲ್ಲಿ ಹೋಗಿ ನಿಂತುಕೊಂಡಿದ್ದಾರೆ.

ಇವರ ಹಿಂದೆ ಆತನ ಆಳೆತ್ತರದ ಫೋಟೊ ರಾರಾಜಿಸುತ್ತಿದೆ. ಈ ಚಿನ್ನಾಭರಣ ಸಂಸ್ಥೆ ಹಾಗೂ ಇದರ ಮಾಲಕನ ವಿವರಗಳನ್ನು ನೋಡಿದರೆ ಯಾರಿಗೂ ಹೆಚ್ಚು ವಿಶ್ವಾಸ ಮೂಡುವುದಿಲ್ಲ. ಆ ವ್ಯಕ್ತಿಯ ವ್ಯಾಪಾರದ ವಿಧಾನ, ಆತ ಪಡೆದುಕೊಳ್ಳುವ ಪ್ರಚಾರ, ಆತನ ವರಸೆ, ಆತನ ಉದ್ದೇಶ ಇವೆಲ್ಲವೂ ಸಂಶಯಾಸ್ಪದವಾಗಿವೆ. ಈಗ ಕೊರೊನ ಸಂಕಷ್ಟದ ಸಂದರ್ಭವನ್ನು ಬಳಸಿಕೊಂಡು ಕಾಂಗ್ರೆಸ್‌ಗೆ ಹತ್ತಿರವಾಗಿ ಸಮಾಜ ಸೇವಾ ಚಟುವಟಿಕೆ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರು ಸುಲಭವಾಗಿ ಸಹಕರಿಸಿದ್ದಾರೆ. ಈ ಹಿರಿಯ ನಾಯಕರು ಆತನ ಸಂಸ್ಥೆಗೆ ಹೋಗಿ ನಿಂತು ಫೋಟೊಕ್ಕೆ ಪೋಸು ಕೊಟ್ಟಿದ್ದನ್ನು ನೋಡಿ ನಾಳೆ ಆ ಸಂಸ್ಥೆಯಲ್ಲಿ ಜನರು ತಮ್ಮ ಇದ್ದ ಬದ್ದ ಉಳಿತಾಯದ ಹಣವನ್ನು ಹೂಡಿಕೆ ಮಾಡಿ ಏನಾದರೂ ಅನಾಹುತವಾದರೆ ಅದಕ್ಕೆ ಇದೇ ಕಾಂಗ್ರೆಸ್ ನಾಯಕರು ಹೊಣೆಯಾಗುತ್ತಾರೆ. ಆ ಅರಿವು ಅವರಿಗೆ ಇರಬೇಕು.

Writer - ವಿಘ್ನೇಶ್ ಎಸ್., ಬೆಂಗಳೂರು

contributor

Editor - ವಿಘ್ನೇಶ್ ಎಸ್., ಬೆಂಗಳೂರು

contributor

Similar News