ಕೋವಿಡ್ 2ನೇ ಅಲೆಯಲ್ಲಿ 420 ವೈದ್ಯರ ಮೃತ್ಯು: ಐಎಂಎ ವರದಿ
ಹೊಸದಿಲ್ಲಿ, ಮೇ 22: ಅತ್ಯಂತ ವಿನಾಶಕಾರಿಯಾಗಿರುವ ಕೋವಿಡ್ ಸೋಂಕಿನ 2ನೇ ಅಲೆಯಲ್ಲಿ ಇದುವರೆಗೆ ಒಟ್ಟು 420 ವೈದ್ಯರು ಮೃತರಾಗಿದ್ದು ದಿಲ್ಲಿಯಲ್ಲೇ 100 ವೈದ್ಯರು ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿ(ಐಎಂಎ) ವರದಿ ಮಾಡಿದೆ. ಬಿಹಾರದಲ್ಲಿ ಕನಿಷ್ಟ 96 ವೈದ್ಯರು, ಉತ್ತರಪ್ರದೇಶದಲ್ಲಿ 41 ವೈದ್ಯರು ಮೃತಪಟ್ಟಿರುವುದಾಗಿ ಐಎಂಎ ಹೇಳಿದೆ. ಕಳೆದ ವಾರ ಐಎಂಎ ಮಾಜಿ ಅಧ್ಯಕ್ಷ ಡಾ. ಕೆಕೆ ಅಗರ್ವಾಲ್ ಕೊರೋನ ಸೋಂಕಿನಿಂದ ಮೃತರಾಗಿದ್ದರು. ಐಎಂಎ ದಾಖಲೆ ಪ್ರಕಾರ ಸೋಂಕಿನ ಪ್ರಥಮ ಅಲೆಯಲ್ಲಿ ದೇಶದಾದ್ಯಂತ 748 ವೈದ್ಯರು ಮೃತಪಟ್ಟಿದ್ದಾರೆ ಎಂದು ಐಎಂಎ ಹೇಳಿದೆ.
ದೇಶದ ಜನತೆಗೆ, ಅದರಲ್ಲೂ ಮುಖ್ಯವಾಗಿ ಮುಂಚೂಣಿ ಕಾರ್ಯಕರ್ತರಾದ ಆರೋಗ್ಯಕ್ಷೇತ್ರದವರಿಗೆ ಸೋಂಕಿನ ಎರಡನೇ ಅಲೆ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿದೆ ಎಂದು ಐಎಂಎ ಅಧ್ಯಕ್ಷ ಡಾ. ಜೆ.ಎ.ಜಯಲಾಲ್ ಹೇಳಿದ್ದಾರೆ. ಭಾರತದಲ್ಲಿ 12 ಲಕ್ಷಕ್ಕೂ ಅಧಿಕ ವೈದ್ಯರಿದ್ದಾರೆ. ಇದರಲ್ಲಿ ಐಎಂಎಯಲ್ಲಿ ನೋಂದಣಿಯಾಗಿರುವ ವೈದ್ಯರ ಸಂಖ್ಯೆ ಕೇವಲ 3.5 ಲಕ್ಷ ಮಾತ್ರ. ಶನಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ 2,57,299 ಹೊಸ ಸೋಂಕು ಪ್ರಕರಣ ಹಾಗೂ 4,194 ಸಾವಿನ ಪ್ರಕರಣ ದಾಖಲಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.