×
Ad

ಕೋವಿಡ್ ಲಸಿಕೆಗೆ 3 ವರ್ಷ ಪೇಟೆಂಟ್ ವಿನಾಯ್ತಿ: ಭಾರತ, ಆಫ್ರಿಕಾ ಪ್ರತಿಪಾದನೆ

Update: 2021-05-23 09:27 IST
ಸಾಂದರ್ಭಿಕ ಚಿತ್ರ (source: PTI)

ಹೊಸದಿಲ್ಲಿ, ಮೇ 23: ಕೋವಿಡ್ ಲಸಿಕೆ, ಔಷಧ ಸೇರಿದಂತೆ ಕೋವಿಡ್-19 ಸಂಬಂಧಿ ಆರೋಗ್ಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಮೂರು ವರ್ಷಗಳ ಕಾಲ ಪೇಟೆಂಟ್‌ನಿಂದ ವಿನಾಯ್ತಿ ನೀಡುವಂತೆ ಭಾರತ, ದಕ್ಷಿಣ ಆಫ್ರಿಕಾ ಹಾಗೂ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಹಲವು ಬಡ ಹಾಗೂ ಅಭಿವೃದ್ಧಿಶೀಲ ದೇಶಗಳು ಪ್ರಸ್ತಾವ ಮುಂದಿಟ್ಟಿವೆ. ಇದರ ಜತೆಗೆ ಅವುಗಳಿಗೆ ಅಗತ್ಯವಿರುವ ಸಾಧನಗಳು ಮತ್ತು ವಿಧಾನ, ಉತ್ಪಾದನಾ ಕ್ರಮಕ್ಕೂ ಈ ವಿನಾಯ್ತಿ ನೀಡಬೇಕು ಎಂದು ಆಗ್ರಹಿಸಿವೆ.

ಲಸಿಕೆ ಹಾಗೂ ಔಷಧಿ ಮಾತ್ರವಲ್ಲದೇ ರೋಗ ಪತ್ತೆ, ಚಿಕಿತ್ಸೆ ವಿಧಾನ, ವೈದ್ಯಕೀಯ ಸಾಧನಗಳು, ವೈಯಕ್ತಿಕ ಸುರಕ್ಷಾ ಸಾಧನಗಳಿಗೂ ವಿನಾಯ್ತಿ ನೀಡಬೇಕು ಎಂಬ ಮನವಿಯನ್ನು ಶುಕ್ರವಾರ ಮಾಡಲಾಗಿದೆ. ರೋಗ ತಡೆ, ಚಿಕಿತ್ಸೆ ಮತ್ತು ಧಾರಕಗಳ ವಿಚಾರದಲ್ಲೂ ಇದು ಅನ್ವಯವಾಗಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿದೆ.

ಈ ಪ್ರಸ್ತಾವವು ತಂತ್ರಜ್ಞಾನ ಹಂಚಿಕೆಗೆ ಸ್ಪಷ್ಟವಾದ ಗವಾಕ್ಷಿಯನ್ನು ಒದಗಿಸಿದ್ದು, ಕೇವಲ ಪೇಟೆಂಟ್ ವಿನಾಯ್ತಿಯಷ್ಟೇ ಲಸಿಕೆ ಉತ್ಪಾದನೆ ಅಥವಾ ಔಷಧ ಉತ್ಪಾದನೆಗೆ ಸಾಕಾಗುವುದಿಲ್ಲ ಎಂಬ ಆತಂಕಕ್ಕೆ ಇದು ಪರಿಹಾರ ಸೂತ್ರ ಹೊಂದಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇವುಗಳಿಗೆ ಅಗತ್ಯ ವಸ್ತುಗಳು ಮತ್ತು ಸಾಧನಗಳನ್ನೂ ವಿನಾಯ್ತಿ ವ್ಯಾಪ್ತಿಯಲ್ಲಿ ಸೇರಿಸಿರುವುದರಿಂದ ಇಡೀ ಮೌಲ್ಯ ಸರಣಿಯ ಲಭ್ಯತೆ ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ.

ವ್ಯಾಪಾರ ಸಂಬಂಧಿ ಬೌದ್ಧಿಕ ಆಸ್ತಿ ಹಕ್ಕುಗಳು (ಟ್ರಿಪ್ಸ್) ವಿನಾಯ್ತಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲಿನಿಂದಲೂ ಆಗ್ರಹಿಸುತ್ತಾ ಬಂದಿದ್ದು, ಇದರಲ್ಲಿ ಕಾಪಿರೈಟ್ ಮತ್ತು ವಿನ್ಯಾಸಗಳಿಗೆ ಸಂಬಂಧಿಸಿದ ನಿಯಮಾವಳಿಯನ್ನೂ ಸಡಿಲಿಸಬೇಕು ಎಂಬ ಅಂಶವೂ ಒಳಗೊಂಡಿದೆ. ಇದೀಗ ಈ ಪ್ರಸ್ತಾವಕ್ಕೆ ಪಾಕಿಸ್ತಾನ ಹಾಗೂ ಇಂಡೋನೇಶ್ಯ ಸೇರಿದಂತೆ 120ಕ್ಕೂ ಹೆಚ್ಚು ದೇಶಗಳಿಂದ ಬೆಂಬಲ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News